ಅಹಮದಾಬಾದ್ (ಗುಜರಾತ್): ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಏಕದಿನ ಕ್ರಿಕೆಟ್ ಜಾತ್ರಗೆ ನಾಳೆ ತೆರೆ ಬೀಳಲಿದೆ. ಈ ಜಾತ್ರೆಯ ಅಂತಿಮ ಅದ್ಭುತ ಮನರಂಜನೆಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮತ್ತು ಪ್ಯಾಟ್ ಕಮಿನ್ಸ್ ಮುಂದಾಳತ್ವದ ಆಸ್ಟ್ರೇಲಿಯಾ ಸಜ್ಜಾಗಿದೆ. 2003ರ ವಿಶ್ವಕಪ್ ಫೈನಲ್, 2015ರ ವಿಶ್ವಕಪ್ ಸೆಮೀಸ್ ಮತ್ತು 2023ರ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಸ್ ಸೋಲಿನ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ರೆಡಿಯಾಗಿದೆ.
ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಎರಡು ತಂಡಗಳು 13ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 10 ಪಂದ್ಯದಲ್ಲಿ ಗೆದ್ದಿರುವ ಭಾರತ ಗೆಲ್ಲುವ ಫೇವ್ರಿಟ್ ಆಗಿದ್ದರೆ, ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾವು ಬಲಿಷ್ಠವಾಗಿದೆ. ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಸೀಸ್ 1-2ರಿಂದ ಸೋಲು ಕಂಡಿತ್ತು. ವಿಶ್ವಕಪ್ ಲೀಗ್ ಹಂತದಲ್ಲೂ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಈ ಎಲ್ಲ ಅಂಶಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ.
ಬಲಿಷ್ಠ ಬ್ಯಾಟಿಂಗ್: ಭಾರತದ ಆರಂಭಿಕರಾದ ಶುಭಮನ್ ಗಿಲ್, ರೋಹಿತ್ ಶರ್ಮಾ ಉತ್ತಮ ಆರಂಭ ನೀಡುತ್ತಿದ್ದಾರೆ. ರೋಹಿತ್ ಅಬ್ಬರದ ಇನ್ನಿಂಗ್ಸ್ ತಂಡಕ್ಕೆ ಪವರ್ ಪ್ಲೇ ಹಂತದಲ್ಲಿ ನೆರವಾಗುತ್ತಿದೆ. ಈ ವರ್ಷ ಗೋಲ್ಡನ್ ಫಾರ್ಮನಲ್ಲಿರುವ ಗಿಲ್ ಸಹ ಶರ್ಮಾಗೆ ಸಾಥ್ ನೀಡುತ್ತಿದ್ದಾರೆ. ಆಸ್ಟ್ರೇಲಿಯಾಕ್ಕೂ ಅನುಭವಿ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭವನ್ನು ನೀಡಿದ್ದಾರೆ. ಆದರೆ ಭಾರತದ ಜೋಡಿಯ ರೀತಿ ಪಾಲುದಾರಿಕೆ ಹಂಚಿಕೊಂಡಿಲ್ಲ.
ರನ್ ಮಷಿನ್ ವಿರಾಟ್ ಆಧಾರ: ಮೂರನೇ ವಿಕೆಟ್ಗೆ ಬ್ಯಾಟಿಂಗ್ ಬರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಆಸರೆ ಆಗಿದ್ದಾರೆ. ಟೂರ್ನಿಯಲ್ಲಿ ಈ ವರೆಗೆ 3 ಶತಕ, 4 ಅರ್ಧಶತಗಳ ನೆರವಿನಿಂದ 711 ರನ್ ಕಲೆಹಾಕಿರುವ ಅವರು, ವಿಶ್ವಕಪ್‌ನ ಟಾಪ್ ಸ್ಕೋರರ್ ಆಗಿದ್ದಾರೆ. ಈ ವಿಶ್ವಕಪ್ನಲ್ಲಿ ಕ್ರಿಕೆಟ್ ಜಗತ್ತು ಕರೆಯುತ್ತಿದ್ದ ಫ್ಯಾಬ್ ಫೋರ್ನಲ್ಲಿ ಯಶಸ್ವಿ ಆದದ್ದು ವಿರಾಟ್ ಮಾತ್ರ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಈ ವಿಶ್ವಕಪ್ನಲ್ಲಿ ಹೆಚ್ಚು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ.
ಅಯ್ಯರ್- ರಾಹುಲ್ ಬಲ:ಗಾಯದಿಂದ ಚೇತರಿಸಿಕೊಂಡು ವಿಶ್ವಕಪ್ ವೇಳೆಗೆ ತಂಡಕ್ಕೆ ಸೇರ್ಪಡೆ ಆದ ಅಯ್ಯರ್ - ರಾಹುಲ್ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದರೂ ರಾಹುಲ್ ಒಂದು ಶತಕ ಸಿಡಿಸಿದರೆ, ಅಯ್ಯರ್ ಬ್ಯಾಟ್ನಿಂದ ಬೆನ್ನು ಬೆನ್ನಿಗೆ ಎರಡು ಶತಕಗಳು ಬಂದಿವೆ. ಆಸೀಸ್ನಲ್ಲಿ ಮಾರ್ಷ, ಲಬುಶೇನ್, ಮ್ಯಾಕ್ಸ್‌ವೆಲ್, ಇಂಗ್ಲಿಸ್ ಕಡೆಯಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಅಲ್ಲೊಂದು ಇಲ್ಲೊಂದು ಪಂದ್ಯದಲ್ಲಿ ಮಾತ್ರ ಆಡಿದ್ದಾರೆ. ತಂಡದ ಆಟಗಾರರಿಂದ ಸ್ಥಿರ ಪ್ರದರ್ಶನ ಬಂದಿಲ್ಲ ಎಂದು ಸ್ವತಃ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.