ಅಹಮದಾಬಾದ್:ಆಸಿಸ್ ಮೊದಲ ಇನ್ನಿಂಗ್ಸ್ನಲ್ಲಿ ನೀಡಿದ್ದ ಬೃಹತ್ ಮೊತ್ತಕ್ಕೆ ಭಾರತ ಸರಿಯಾದ ಉತ್ತರ ನೀಡುತ್ತಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 289 ರನ್ ಗಳಿಸಿದೆ. ಶುಭಮನ್ ಗಿಲ್ 128 ಮತ್ತು ವಿರಾಟ್ 59* ರನ್ ಭಾರತಕ್ಕೆ 250+ ರನ್ ದಾಟಲು ಬೆನ್ನೆಲುಬಾಗಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಭಾರತ ಮೂರು ವಿಕೆಟ್ ಕಳೆದುಕೊಂಡಿದ್ದು 191ರನ್ಗಳ ಹಿನ್ನಡೆಯಲ್ಲಿದೆ.
ಭಾರತ ಇಂದು ಮೂರು ಅವಧಿಯಲ್ಲಿ ಒಂದೊಂದು ವಿಕೆಟ್ ಕಳೆದುಕೊಂಡಿತು. ಮೊದಲ ಅವಧಿಯಲ್ಲಿ ರೋಹಿತ್, ಟೀ ಬ್ರೇಕ್ ಮುನ್ನ ಪೂಜಾರ ಔಟ್ ಆಗಿದ್ದಾರೆ. ಕೊನೆಯ ಸೆಷನ್ನಲ್ಲಿ ಶತಕ ಗಳಿಸಿದ್ದ ಗಿಲ್ ಔಟ್ ಆದರು. ಗಿಲ್ ನಂತರ ಬಡ್ತಿ ಪಡೆದು ರವೀಂದ್ರ ಜಡೇಜಾ (16) ಮತ್ತು ಮೂರನೇ ವಿಕೆಟ್ ಆಗಿ ಬಂದ ವಿರಾಟ್ ಕೊಹ್ಲಿ (59*) ಕ್ರೀಸ್ನಲ್ಲಿದ್ದಾರೆ.
ತವರಿನಲ್ಲಿ ನಾಲ್ಕು ಸಾವಿರ ರನ್ ದಾಖಲೆ:ವಿರಾಟ್ ಕೊಹ್ಲಿ ತವರಿನಲ್ಲಿ 4000 ರನ್ ದಾಖಲಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯ ವಿರಾಟ್ ಕೊಹ್ಲಿ ಅವರ ತವರಿನ 50ನೇ ಪಂದ್ಯವಾಗಿದೆ. 50 ನೇ ಪಂದ್ಯದಲ್ಲಿ 4 ಸಾವಿರ ರನ್ ಗಡಿ ಮುಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ (7,216), ರಾಹುಲ್ ದ್ರಾವಿಡ್ (5,598), ಸುನಿಲ್ ಗವಾಸ್ಕರ್ (5,067) ಮತ್ತು ವೀರೇಂದ್ರ ಸೆಹ್ವಾಗ್ (4,656) ನಂತರ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ತವರಿನಲ್ಲಿ 4,000 ಟೆಸ್ಟ್ ರನ್‌ಗಳನ್ನು ತಲುಪಿದ ಐದನೇ ಭಾರತೀಯ ಬ್ಯಾಟರ್ ಆಗಿದ್ದಾರೆ. 77 ಇನ್ನಿಂಗ್ಸ್ನಲ್ಲಿ ಈ ಸಾಧನೆಯನ್ನು ವಿರಾಟ್ ಮಾಡಿದ್ದಾರೆ. ಈ ಮೂಲಕ ಗವಾಸ್ಕರ್ (87) ಮತ್ತು ದ್ರಾವಿಡ್ (88) ಅವರನ್ನು ಹಿಂದಿಕ್ಕಿದ್ದಾರೆ. ತವರಿನಲ್ಲಿ ಈ ವರೆಗೆ ಕೊಹ್ಲಿ 13 ಟೆಸ್ಟ್ ಶತಕಗಳನ್ನು ದಾಖಲಿಸಿದ್ದಾರೆ.
ಆರಂಭಿಕ ಆಟಗಾರ ಶುಭಮನ್ ಗಿಲ್ ತನ್ನ ವೈಯಕ್ತಿಕ ಎರಡನೇ ಟೆಸ್ಟ್ ಶತಕವನ್ನು ದಾಖಲು ಮಾಡಿದ್ದಾರೆ. ಮೊದಲ ಅವಧಿಯಲ್ಲಿ ರೋಹಿತ್ ವಿಕೆಟ್ ನಂತರ ಬಂದ ಚೇತೇಶ್ವರ ಪೂಜಾರ ಗಿಲ್ ಜೊತೆ ಸೇರಿ 113 ರನ್ಗಳ ಜೊತೆಯಾಟ ಮಾಡಿ ಔಟ್ ಆದರು. ಪೂಜಾರ ವಿಕೆಟ್ ಬೆನ್ನಲ್ಲೇ ಟೀ ಬ್ರೇಕ್ ಘೋಷಣೆ ಮಾಡಿದರು, ಈ ವೇಳೆಗೆ ಭಾರತ 187ಕ್ಕೆ ಎರಡು ವಿಕೆಟ್ ಕಳೆದುಕೊಂಡಿತು.
ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್ ಶರ್ಮಾ 17 ಮತ್ತು ಗಿಲ್ 18 ರನ್ ಗಳಿಸಿದ್ದರು. ಭಾರತ ಯಾವುದೇ ವಿಕೆಟ್ ನಷ್ಟ ಇಲ್ಲದೇ 444 ರನ್ಗಳ ಹಿನ್ನಡೆಯಲ್ಲಿತ್ತು. ಇಂದು ಮುಂಜಾನೆ ಬ್ಯಾಟಿಂಗ್ ಆರಂಭಿಸಿದ ಗಿಲ್ ಮತ್ತು ರೋಹಿತ್ (35) ಜೋಡಿಯನ್ನು ಮ್ಯಾಥ್ಯೂ ಕುಹ್ನೆಮನ್ ಅಗಲಿಸಿದರು. ನಂತರ ಬಂದ ಚೇತೇಶ್ವರ ಪೂಜಾರ ತಮ್ಮ 102ನೇ ಪಂದ್ಯದಲ್ಲಿ 50 ರನ್ಗೆ 8 ರನ್ನ ಸೇರಿಸುವಷ್ಟರಲ್ಲೇ ಎಡವಿದರು. 42 ರನ್ ಗಳಿಸಿ ಆಡುತ್ತಿದ್ದ ಪೂಜಾರ ವಿಕೆಟ್ ಅನ್ನು ಮಾರ್ಫಿ ಪಡೆದರು.