ಕರ್ನಾಟಕ

karnataka

ETV Bharat / sports

ತವರಿನಲ್ಲಿ ವಿಶ್ವಕಪ್​ ಕೈಚೆಲ್ಲಿದ ಭಾರತ: 6ನೇ ಬಾರಿ ಆಸೀಸ್​ಗೆ ಒಲಿದ ಚಾಂಪಿಯನ್​ ಪಟ್ಟ - India vs Australia Final Live Score update

India vs Australia Final : ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ನಾಲ್ಕನೇ ವಿಕೆಟ್​ ಮಾಡಿದ 192 ರನ್​ಗಳ ಪಾಲುದಾರಿಕೆಯಿಂದಾಗಿ ಆಸ್ಟ್ರೇಲಿಯಾ 6 ವಿಕೆಟ್​ಗಳಿಂದ ಗೆದ್ದು 6ನೇ ಸಲ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

India vs Australia Final
India vs Australia Final

By ETV Bharat Karnataka Team

Published : Nov 19, 2023, 6:43 PM IST

Updated : Nov 19, 2023, 9:59 PM IST

ಅಹಮದಾಬಾದ್​ (ಗುಜರಾತ್​):ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್​ ಗೆದ್ದುಕೊಂಡಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ಭಾರತ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್​ 7 ಓವರ್​ ಉಳಿಸಿಕೊಂಡು 6 ವಿಕೆಟ್​ನಿಂದ ಗೆದ್ದಿದೆ. 2003ರಲ್ಲಿ ಕಾಂಗರೂ ಪಡೆ​ ವಿರುದ್ಧ ಸೋಲು ಕಂಡಿದ್ದ ಭಾರತ, ಇದೀಗ 20 ವರ್ಷದ ನಂತರವೂ ವಿಶ್ವಕಪ್ ಫೈನಲ್​ನಲ್ಲಿ ಸೋಲು ಕಂಡಿದೆ.

2003ರ ವಿಶ್ವಕಪ್​​ನಲ್ಲಿ ರಿಕಿ ಪಾಂಟಿಂಗ್​ 140 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾದರೆ, 2023ರ ವಿಶ್ವಕಪ್​ನಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಮುಳುವಾದರು. ಚೊಚ್ಚಲ ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ ಮತ್ತೆಂದೂ ಫೈನಲ್​ ಹಂತಕ್ಕೆ ಬಂದು ಎಡವಿಲ್ಲ. 1975ರ ನಂತರ 6 ಬಾರಿ ಫೈನಲ್​ ಪ್ರವೇಶಿಸಿರುವ ಕಾಂಗರೂ ಪಡೆ ಪ್ರತಿ ಬಾರಿಯೂ ಚಾಂಪಿಯನ್​ ಆಗಿ ಹೊಮ್ಮಿರುವುದು ಆ ತಂಡದ ಸಾಧನೆ.

ವಿಶ್ವಕಪ್​ನ ಲೀಗ್​ ಮತ್ತು ಸೆಮೀಸ್​ ಸೇರಿ 10 ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿದ್ದ ಭಾರತ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ತಂಡ ವಿರಾಟ್​ ಕೊಹ್ಲಿ (54), ಕೆ ಎಲ್​ ರಾಹುಲ್​ (66) ಅರ್ಧಶತಕ ಮತ್ತು ನಾಯಕ ರೋಹಿತ್​ ಶರ್ಮಾ ಅವರ 47 ರನ್​ಗಳ ಕೊಡುಗೆಯಿಂದ 50 ಓವರ್​ ಅಂತ್ಯಕ್ಕೆ ಎಲ್ಲಾ ವಿಕೆಟ್​ ಕಳೆದುಕೊಂಡು 240 ರನ್​ ಕಲೆಹಾಕಿತ್ತು.

241 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಭಾರತದ ಬೌಲರ್​ಗಳು ಬಿಗಿ ದಾಳಿ ಮೂಲಕ ಕಾಡಿದರು. ಇದರಿಂದ ಮೂರು ವಿಕೆಟ್ ಆಸ್ಟ್ರೇಲಿಯಾ ಕಳೆದುಕೊಂಡಿತ್ತು. ಆದರೆ, ನಂತರ ನಾಲ್ಕನೇ ವಿಕೆಟ್​ಗೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ 192 ರನ್​ ಪಾಲುದಾರಿಕೆ ಮೂಲಕ ಭಾರತ ತಂಡದಿಂದ ಗೆಲುವನ್ನು ಕಸಿದುಕೊಂಡರಲ್ಲದೆ, ಆಸೀಸ್​ ಚಾಂಪಿಯನ್​ ಪಟ್ಟ ಅಲಂಕರಿಸುವಂತೆ ಮಾಡಿದರು.

ಆಸೀಸ್​ಗೆ ಆರಂಭಿಕ ಆಘಾತ: ಎರಡನೇ ಓವರ್​ನಲ್ಲಿ ಮೊಹಮ್ಮದ್​ ಶಮಿ ಡೇವಿಡ್​ ವಾರ್ನರ್​ (7) ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಮಿಚೆಲ್ ಮಾರ್ಷ್ (15) ಮತ್ತು ಸ್ಟೀವನ್ ಸ್ಮಿತ್ (4) ವಿಕೆಟ್​ ಉರುಳಿತು. ಶಮಿ 1 ವಿಕೆಟ್​ ಪಡೆದರೆ, ಬುಮ್ರಾ 2 ವಿಕೆಟ್​ ಕಬಳಿಸಿದರು. ಆದರೆ ನಂತರ ಭಾರತದ ಯಾವುದೇ ಬೌಲರ್ ಕೂಡ​ ವಿಕೆಟ್​ ಪಡೆಯಲಿಲ್ಲ.

ಹೆಡ್, ಲಬುಶೇನ್ ಜೊತೆಯಾಟ: 47ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಕ್ಕೆ 192 ರನ್​ಗಳ ಪಾಲುದಾರಿಕೆಯನ್ನು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಮಾಡಿದರು. ಈ ಜೊತೆಯಾಟ ಮುರಿಯುವಲ್ಲಿ ಟೀಮ್​ ಇಂಡಿಯಾದ ಬೌಲರ್​ಗಳು ವಿಫಲರಾದರು.

ಟ್ರಾವಿಸ್ ಹೆಡ್ 120 ಬಾಲ್​ ಆಡಿ 15 ಬೌಂಡರಿ, 4 ಸಿಕ್ಸ್​ನಿಂದ 137 ರನ್ ​ಗಳಿಸಿದರು. ಮಾರ್ನಸ್ ಲಬುಶೇನ್ 110 ಬಾಲ್​ ಎದುರಿಸಿ 4 ಬೌಂಡರಿ ಸಹಾಯದಿಂದ 58 ರನ್​​ ಕಲೆಹಾಕಿದರು. ಇವರ ಈ ಇನ್ನಿಂಗ್ಸ್​​ ಸಹಾಯದಿಂದ ಆಸ್ಟ್ರೇಲಿಯಾ 43ನೇ ಓವರ್​ಗೆ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸಿ ಏಕದಿನ ವಿಶ್ವಕಪ್​ ಚಾಂಪಿಯನ್​ ಆಯಿತು. ಶತಕ ಗಳಿಸಿದ ಹೆಡ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ:​ವಿಶ್ವಕಪ್​ ಫೈನಲ್​ನಲ್ಲಿ ಭಾರತದ ನೀರಸ ಬ್ಯಾಟಿಂಗ್​ ಪ್ರದರ್ಶನ: ಕಾಂಗರೂ ಪಡೆಗೆ 241 ರನ್​ಗಳ ಗುರಿ

Last Updated : Nov 19, 2023, 9:59 PM IST

ABOUT THE AUTHOR

...view details