ಅಹಮದಾಬಾದ್:ಇಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4 ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕದನದ ಭವಿಷ್ಯ ಬರೆಯುವ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಕ್ಷಿಯಾಗಿದ್ದಾರೆ. ಉಭಯ ಪ್ರಧಾನಿಗಳು ಟೆಸ್ಟ್ ಪಂದ್ಯ ವೀಕ್ಷಿಸುತ್ತಿದ್ದು ನಿರೀಕ್ಷೆ ಹೆಚ್ಚಿಸಿದೆ.
ಪಂದ್ಯದ ಟಾಸ್ಗೂ ಮೊದಲು ಪ್ರಧಾನಿಗಳು ಉಭಯ ನಾಯಕರಿಗೆ ವಿಶೇಷ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು ನಾಯಕ ರೋಹಿತ್ ಶರ್ಮಾರಿಗೆ ಕ್ಯಾಪ್ ನೀಡಿದರೆ, ಆಸೀಸ್ ನಾಯಕ ಸ್ಟೀವನ್ ಸ್ಮಿತ್ರಿಗೆ ಅಲ್ಬನೀಸ್ ಅವರು ಬ್ಯಾಗಿ ಗ್ರೀನ್ ಕ್ಯಾಪ್ ಕೊಟ್ಟರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 75 ವರ್ಷಗಳ ಸ್ನೇಹವನ್ನು ಇದೇ ವೇಳೆ ಆಚರಿಸಲಾಯಿತು.
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ವಾಗತಿಸಿದರು. ಬಳಿಕ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರಿಗೆ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಮೈದಾನದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಉಭಯ ತಂಡದ ನಾಯಕರಿಗೆ ಪ್ರಧಾನಿಗಳು ವಿಶೇಷ ಟೆಸ್ಟ್ ಕ್ಯಾಪ್ ನೀಡಿದರು. ನಂತರ ನಾಲ್ವರೂ ಸ್ನೇಹದ ಸಂಕೇತವಾಗಿ ಕೈ ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.
ಮೈದಾನದಲ್ಲಿ ಪ್ರಧಾನಿಗಳ ರೌಂಡ್:ಇದಾದ ಬಳಿಕ ವಿಶೇಷವಾಗಿ ತಯಾರಿಸಲಾಗಿದ್ದ ರಥದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಪ್ರೇಕ್ಷಕರತ್ತ ಕೈಬೀಸುತ್ತಾ ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಂಗಣದೊಳಗೆ ವಿಶೇಷವಾಗಿ ನಿರ್ಮಿಸಲಾದ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ 75 ವರ್ಷಗಳ ಕ್ರಿಕೆಟ್ ಬಾಂಧವ್ಯವನ್ನು ಸೂಚಿಸುವ, ಅವಿಸ್ಮರಣೀಯ ಕ್ಷಣಗಳನ್ನೊಳಗೊಂಡ ಚಿತ್ರಗಳನ್ನು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಪ್ರಧಾನಿಗಳಿಗೆ ಪರಿಚಯಿಸಿದರು.
ಪಂದ್ಯ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್ ಮೈದಾನ ಪ್ರವೇಶಿಸಿ ಆಟಗಾರರ ಜತೆ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡುವ ಮೂಲಕ ಪಂದ್ಯಕ್ಕೆ ಅಧಿಕೃತ ಚಾಲನೆ ನೀಡಿದರು. ಆಟಗಾರರಿಗೆ ಹಸ್ತಲಾಘವ ನೀಡಿ ಶುಭ ಕೋರಿದರು.