ಅಹಮದಾಬಾದ್:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಎಂದೇ ಬಿಂಬಿತವಾಗಿದ್ದ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಅಂತಿಮ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಕಳೆದ ಮೂರು ಪಂದ್ಯಗಳು 2.5 ದಿನದಲ್ಲಿ ಫಲಿತಾಂಶ ಕಂಡಿದ್ದವು. ಈ ಪಂದ್ಯ ಐದು ದಿನ ನಡೆದರು ಸಮಗೊಂಡಿದೆ. ಇದರಿಂದ ಸರಣಿ 2-1 ರಲ್ಲಿ ಭಾರತ ತನ್ನ ವಶಕ್ಕೆ ತೆಗೆದುಕೊಂಡಿದೆ.
ಕೊನೆಯ ದಿನದಾಟದಲ್ಲಿ ಟ್ರಾವೆಸ್ ಹೆಡ್ ಮತ್ತು ಲಾಬುಶೇನ್ ನೆಲಕಚ್ಚಿ ಆಡಿ ಪಂದ್ಯವನ್ನು ಡ್ರಾ ಮಾಡಿದರು. ಆಸಿಸ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ತಮ್ಮ ಟೆಸ್ಟ್ ಶತಕಕ್ಕೆ 10 ರನ್‌ನಿಂದ ವಂಚಿತರಾದರು. ಎಡಗೈ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ 50 ನೇ ಟೆಸ್ಟ್ ವಿಕೆಟ್ ಪಡೆದರು. ಆಸ್ಟ್ರೇಲಿಯಾ 64 ಓವರ್‌ಗಳಲ್ಲಿ 158/2 ತಲುಪಿ, ಭಾರತಕ್ಕಿಂತ 67 ರನ್ ಮುನ್ನಡೆ ಸಾಧಿಸಿತು. ಕಳೆದ 10 ವರ್ಷಗಳಲ್ಲಿ ಭಾರತ ತವರಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸದೇ ಇರುವುದು ಇದೇ ಮೊದಲು.
ಇಂದಿನ ದಿನ ಆಸ್ಟ್ರೇಲಿಯನ್ ಆಟಗಾರರು ಡ್ರಾ ಮಾಡುವ ಚಿತ್ತದಲ್ಲೇ ಕ್ರೀಸಿಗಿಳಿದಿದ್ದರು. ಮೊದಲ ಸೆಷನ್ ಆರಂಭವಾದಾಗ ನೈಟ್ ವಾಚ್ಮೆನ್ ಆಗಿ ಬಂದಿದ್ದ ಮ್ಯಾಥ್ಯೂ ಕುಹ್ನೆಮನ್ 6 ರನ್ಗೆ ಅಶ್ವಿನ್ಗೆ ಔಟ್ ಆದರು. ನಂತರ ಬಂದ ಲಬುಶೇನ್ ಟ್ರಾವೆಸ್ ಹೆಡ್ ಜೊತೆಗೆ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ಅಜಮಾಸು 130 ರನ್ ಗಳ ಜೊತೆಯಾಟವಾಡಿದರು.
ಭೋಜನ ವಿರಾಮದ ವೇಳೆಗೆ ಆಸಿಸ್ 73ಕ್ಕೆ 1 ವಿಕೆಟ್ ಮಾತ್ರ ಕಳೆದುಕೊಂಡಿತ್ತು. ಭಾರತ ಸಾಧಿಸಿದ್ದ ಮುನ್ನಡೆಯಿಂದ ಆಸಿಸ್ 18ರನ್ಗಳ ಹಿನ್ನಡೆ ಅನುಭವಿಸಿತ್ತು. ಊಟದ ನಂತರ ಶತಕದ ಅಂಚಿನಲ್ಲಿದ್ದ ಹೆಡ್ ಅವರನ್ನು ಅಕ್ಷರ್ ಪಟೇಲ್ ಪೆವಿಲಿಯನ್ಗೆ ಅಟ್ಟಿದರು. ಈ ಮೂಲಕ ಅಕ್ಷರ್ ತವರಿನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು. ಟೀ ಸೆಷನ್ ವೇಳೆಗೆ ಭಾರತಕ್ಕಿಂತ 67 ರನ್ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿತ್ತು. ಪಂದ್ಯ ಫಲಿತಾಂಶ ಹಿತವಾಗುವ ಕಾರಣ ಡ್ರಾ ಎಂದು ಘೋಷಣೆ ಮಾಡಲಾಯಿತು.