ಅಹಮದಾಬಾದ್, ಗುಜರಾತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ (India vs Australia)ನ ಮೊದಲ ದಿನದಾಟ ಪೂರ್ಣಗೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ. ಉಸ್ಮಾನ್ ಖವಾಜಾ (104*; 251 ಎಸೆತಗಳಲ್ಲಿ 15 ಬೌಂಡರಿ) ಶತಕ ಗಳಿಸಿ ತಮ್ಮ ಆಟವನ್ನು ನಾಳೆಗೆ ಕಾಯ್ದಿರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕ್ಯಾಮರೂನ್ ಗ್ರೀನ್ (49*; 64 ಎಸೆತಗಳಲ್ಲಿ 8 ಬೌಂಡರಿ) ಅವರ ಅರ್ಧಶತಕಕ್ಕೆ ಒಂದು ರನ್ ಬಾಕಿ ಉಳಿದಿದ್ದು, ಅವರು ನಾಳೆಗೆ ತಮ್ಮ ಆಟವನ್ನು ಕಾಪಾಡಿಕೊಂಡಿದ್ದಾರೆ.
ತಮ್ಮ ತಂಡದ ಪರ ಟ್ರಾವಿಸ್ ಹೆಡ್ 32 ರನ್, (44 ಎಸೆತ, 7 ಬೌಂಡರಿ), ಲಾಬುಶೇನ್ಗೆ 3 ರನ್, ಹ್ಯಾಂಡ್ಸ್‌ಕಾಂಬ್ 17 ರನ್ (27 ಎಸೆತ, 3 ಬೌಂಡರಿ) ಮತ್ತು ಸ್ಟೀವ್ ಸ್ಮಿತ್ 38 ರನ್ (135 ಎಸೆತ, 3 ಬೌಂಡರಿ) ಗಳಿಸಿದರು. ಭಾರತದ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಅಶ್ವಿನ್ ವಾಪಸ್ ಪೆವಿಲಿಯನ್ ಕಳುಹಿಸುವಲ್ಲಿ ಸಫಲರಾದರು. ಹೆಡ್ ಔಟಾದ ಬೆನ್ನೆಲ್ಲೇ 3 ರನ್ ಗಳಿಸಿದ್ದ ಲಾಬುಶೇನ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಭೋಜನ ವಿರಾಮದ ವೇಳೆಗೆ ಆಸೀಸ್ 29 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಎರಡನೇ ಸೆಷನ್ನಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳು ನಿಧಾನವಾಗಿ ಆಟವಾಡಿ ಭಾರತದ ಬೌಲರ್ಗಳ ತಾಳ್ಮೆಯನ್ನು ಪರೀಕ್ಷಿಸಿದರು. ಒಂದು ವಿಕೆಟ್ ಪತನವಿಲ್ಲದೇ ಸೆಷನ್ ಕೊನೆಗೊಂಡಿತು.
ಸುಮಾರು 40 ಓವರ್ಗಳ ಬಳಿಕ ಆಸೀಸ್ ಮೂರನೇ ವಿಕೆಟ್ ಕಳೆದುಕೊಂಡಿತು. ಚಹಾ ವಿರಾಮದ ನಂತರ ರವೀಂದ್ರ ಜಡೇಜಾ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದರು. ಇದು ಉಸ್ಮಾನ್ ಖವಾಜಾ ಅವರೊಂದಿಗೆ ಮೂರನೇ ವಿಕೆಟ್‌ಗೆ ಕಲೆ ಹಾಕಿದ್ದ 79 ರನ್‌ಗಳ ಜೊತೆಯಾಟವನ್ನು ಅಂತ್ಯಗೊಳಿಸಿತು. ಸ್ಟೀವ್ ಸ್ಮಿತ್ ಔಟಾದ ಬಳಿಕ ಕ್ರೀಸ್ಗೆ ಬಂದ ಪೀಟರ್ ಹ್ಯಾಂಡ್ಸ್ ಕಾಂಬ್ ಆಕ್ರಮಣಕಾರಿ ಆಟವಾಡಲು ಯತ್ನಿಸಿದರು. ಆದರೆ ಶಮಿ (70.4ನೇ ಓವರ್) ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.