ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟರ್ಗಳು ಆಸಿಸ್ನ ಬೃಹತ್ ಮೊತ್ತಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ. ಅಂತಿಮ ಟೆಸ್ಟ್ನ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 571ಕ್ಕೆ ಆಲ್ಔಟ್ ಆಗಿದ್ದು, ಆಸಿಸ್ ಬ್ಯಾಟಿಂಗ್ ಆರಂಭಿಸಿದ್ದು 3 ರನ್ ಗಳಿಸಿದೆ. ಕ್ರೀಸ್ನಲ್ಲಿ ಮ್ಯಾಥ್ಯೂ ಕುಹ್ನೆಮನ್ (0*) ಮತ್ತು ಟ್ರಾವೆಸ್ ಹೆಡ್ (3*) ಇದ್ದಾರೆ.
ಎರಡನೇ ಸೆಷನ್ ವೇಳೆಗೆ 5 ವಿಕೆಟ್ ನಷ್ಟಕ್ಕೆ 472 ರನ್ ಗಳಿಸಿದ್ದ ಭಾರತ ಆಸಿಸ್ ನೀಡಿದ್ದ ಮೊತ್ತದಿಂದ 8 ರನ್ ಹಿನ್ನಡೆಯಲ್ಲಿತ್ತು. ಮೂರನೇ ಸೆಷನ್ನಲ್ಲಿ ಭಾರತದ ಆಟಗಾರರು ಬಿರುಸಿನ ಆಟಕ್ಕೆ ಮುಂದಾದರು ಇದರಿಂದ ವಿಕೆಟ್ ನಷ್ಟ ಅನುಭವಿಸಿದರು. ಮೂರನೇ ಅವಧಿಯಲ್ಲಿ ಭಾರತ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಜಡೇಜ 28 ರನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಕೆಟ್ ಕೀಪರ್ ಶ್ರೀಕರ್ ಭರತ್ 44ಕ್ಕೆ ಔಟ್ ಆದರು. ವಿರಾಟ್ ಜೊತೆಗೂಡಿದ ಅಕ್ಷರ್ ಪಟೇಲ್ ಬಿರುಸಿನ ಬ್ಯಾಟಿಂಗ್ ಮಾಡಿದರು. ಇಬ್ಬರು 50+ ರನ್ ಜೊತೆಯಾಟ ಮಾಡಿದ್ದು ತಂಡ ಮುನ್ನಡೆ ಪಡೆಯಲು ಸಹಕಾರಿಯಾಯಿತು. 113 ಎಸೆತಗಳನ್ನು ಎದುರಿಸಿದ ಅಕ್ಷರ್ 4 ಸಿಕ್ಸ್ ಮತ್ತು ಐದು ಬೌಂಡರಿಯಿಂದ 79 ರನ್ ಕೊಡುಗೆ ನೀಡಿ ಔಟ್ ಆದರು. ಇವರ ನಂತರ ಬಂದ ಅಶ್ವಿನ್ (7) ಮತ್ತು ಉಮೇಶ್ (0) ಬೇಗ ವಿಕೆಟ್ ಒಪ್ಪಿಸಿದರು. 186 ರನ್ ಗಳಿಸಿದ್ದ ವಿರಾಟ್ ಮಾರ್ಫಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಅಯ್ಯರ್ ಅನಾರೋಗ್ಯದ ಕಾರಣ ಬ್ಯಾಟಿಂಗ್ ಬರಲಿಲ್ಲ.
ಬ್ಯಾಟಿಂಗ್ಗೆ ಬಾರದ ಅಯ್ಯರ್:ಜಡೇಜ ನಂತರ ಬ್ಯಾಟಿಂಗ್ ಬರಬೇಕಾಗಿದ್ದ ಅಯ್ಯರ್ ಬೆನ್ನು ನೋವಿನ ಬ್ಯಾಟಿಂಗ್ ಬರಲಿಲ್ಲ. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿತ್ತು. ಸ್ಕ್ಯಾನಿಂಗ್ಗೆ ಹೋದ ಅಯ್ಯರ್ ಆರೋಗ್ಯ ಸ್ಥಿತಿಯ ಬಗ್ಗೆ ನಾಳೆ ತಿಳಿದು ಬರಲಿದೆ.
ಆಸಿಸ್ ವಿರುದ್ಧ ವಿರಾಟ್ ದಾಖಲೆಯ ರನ್:ವಿರಾಟ್ ಕೊಹ್ಲಿ ಆಸಿಸ್ ವಿರುದ್ಧ 169 ರನ್ ಗಳಿಸಿದ್ದು ಹೆಚ್ಚಿನ ರನ್ ಆಗಿತ್ತು. 186 ರನ್ ಗಳಿಸಿದ ವಿರಾಟ್ ತಮ್ಮ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ದಾಖಲೆ ಮುರಿದು ಹೊಸಾ ಮೈಲಿಗಲ್ಲು ಸೃಷ್ಠಿಸಿಕೊಂಡರು. ಈ ಪಂದ್ಯದಲ್ಲಿ 3 ವರೆ ವರ್ಷದ ನಂತರ ವಿರಾಟ್ ಬ್ಯಾಟ್ನಿಂದ ಶತಕ ದಾಖಲಾಯಿತು. ಇದು ವಿರಾಟ್ ಕೊಹ್ಲಿಯ ಟೆಸ್ಟ್ನ 28ನೇ ಶತಕವಾದರೆ, ಮೂರು ವಿಭಾಗದ ಅಂತರಾಷ್ಟ್ರೀಯ ಕ್ರಿಕೆಟ್ನ 75ನೇ ಶತಕವಾಗಿದೆ.