ಇಂದೋರ್(ಮಧ್ಯಪ್ರದೇಶ):ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನ ಮೊದಲ ದಿನದಂದು ಭಾರತವನ್ನು ಸ್ಪಿನ್ ಖೆಡ್ಡಾಕ್ಕೆ ಕೆಡವಿದ್ದ ಆಸ್ಟ್ರೇಲಿಯಾ, 2ನೇ ದಿನದಲ್ಲಿ ತಾನೂ ಸರ್ವಪತನ ಕಂಡಿತು. 47 ರನ್ಗಳ ಮುನ್ನಡೆಯೊಂದಿಗೆ ದಿನದಾಟ ಆರಂಭಿಸಿದ ಆಸೀಸ್ ಪಡೆ ಕೇವಲ 11 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಇದರಿಂದ ತಂಡ ಮೊದಲ ಇನಿಂಗ್ಸ್ನಲ್ಲಿ 197 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ರವೀಂದ್ರ ಜಡೇಜಾ, ಆರ್.ಅಶ್ವಿನ್ ಮತ್ತು ಉಮೇಶ್ ಯಾದವ್ ಕಾಂಗರೂ ಪಡೆಯನ್ನು ಕಾಡಿದರು.
4 ವಿಕೆಟ್ಗೆ 156 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಆಸೀಸ್ ಕ್ಯಾಮರೂನ್ ಗ್ರೀನ್ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ತುಸು ಹೋರಾಟ ನಡೆಸಿದರು. ಇಬ್ಬರೂ ಸೇರಿ 30 ಸೇರಿಸಿ ಔಟಾದರು. ಹ್ಯಾಂಡ್ಸ್‌ಕಾಂಬ್ 19 ರನ್ ಗಳಿಸಿ ಔಟಾಗುವ ಮೂಲಕ ತಂಡ ದಿಢೀರ್ ಕುಸಿತ ಕಂಡಿತು. ಗ್ರೀನ್ 21 ರನ್ ಮಾಡಿದರೆ, ಅಲೆಕ್ಸ್ ಕ್ಯಾರಿ 3, ಮಿಚೆಲ್ ಸ್ಟಾರ್ಕ್ 1, ನಾಥನ್ ಲಿಯಾನ್ 5, ಮರ್ಫಿ 0, ಕುಹ್ನೆಮನ್ ಸೊನ್ನೆ ಸುತ್ತಿ ಇನಿಂಗ್ಸ್ ಮುಗಿಸಿದರು.
ಬೆಳಗಿನ ಜಾವವೇ ಆಸೀಸ್ ಮೇಲೆ ದಂಡೆತ್ತಿ ಬಂದ ಉಮೇಸ್ ಯಾದವ್ ಕರಾರುವಾಕ್ ದಾಳಿಯಿಂದ ಮೂರು ವಿಕೆಟ್ ಉರುಳಿಸಿದರೆ, ಸ್ಪಿನ್ನರ್ ಅಶ್ವಿನ್ ಮೂವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಮೂರು ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿತ್ತು. ನಿನ್ನೆ ರವೀಂದ್ರ ಜಡೇಜಾ ಅವರು, 60 ರನ್ ಮಾಡಿ ಮುನ್ನುಗ್ಗುತ್ತಿದ್ದ ಉಸ್ಮಾನ್ ಖವಾಜಾ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು.