ಇಂದೋರ್ (ಮಧ್ಯಪ್ರದೇಶ): ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ. ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಪಡೆ ಕೇವಲ 163 ರನ್ಗಳಿಗೆ ಆಲೌಟ್ ಆಗಿದೆ. ಆಸೀಸ್ ತಂಡದ ಗೆಲುವಿಗೆ 76 ರನ್ಗಳ ಗುರಿ ಇದೆ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 109 ರನ್ಗಳಿಗೆ ಸರ್ವಪತನ ಕಂಡಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 197 ರನ್ಗಳನ್ನು ಪೇರಿಸಿತ್ತು. ಈಗ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ 163 ರನ್ಗಳಿಗೆ ಆಲೌಟ್ ಆಗಿ, ಎದುರಾಳಿ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ.
4 ಪಂದ್ಯಗಳ ಸರಣಿಯಲ್ಲಿ ರೋಹಿತ್ ಪಡೆ ಮೊದಲೆರಡು ಪಂದ್ಯಗಳನ್ನು ಗೆದ್ದು, 2-0 ಅಂತರದಿಂದ ಮುನ್ನಡೆಯಲ್ಲಿದೆ. ಮೂರನೇ ಪಂದ್ಯದ ಮೊದಲ ದಿನವೇ ಅಲ್ಪ ಮೊತ್ತಕ್ಕೆ ಭಾರತ ತಂಡವನ್ನು ಆಸ್ಟ್ರೇಲಿಯಾ ಸ್ಪಿನ್ ಖೆಡ್ಡಾಕ್ಕೆ ಕೆಡವಿತ್ತು. ಎರಡನೇ ದಿನದಲ್ಲಿ ಆಸ್ಟ್ರೇಲಿಯಾ ಕೂಡ ಬೇಗನೇ ಸರ್ವಪತನ ಕಂಡಿತ್ತು. 47 ರನ್ಗಳ ಮುನ್ನಡೆಯೊಂದಿಗೆ ದಿನದಾಟ ಆರಂಭಿಸಿದ ಆಸೀಸ್ ಪಡೆ ಕೊನೆಯ ಆರು ವಿಕೆಟ್ಗಳನ್ನು ಕೇವಲ 11 ರನ್ಗಳಿಗೆ ಕಳೆದುಕೊಂಡು ದಿಢೀರ್ ಕುಸಿತ ಅನುಭವಿಸಿತ್ತು. ಇದರಿಂದ ತಂಡ ಮೊದಲ ಇನಿಂಗ್ಸ್ನಲ್ಲಿ 197 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ರವಿಚಂದ್ರನ್ ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ ಮೂರು ವಿಕೆಟ್ಗಳನ್ನು ಪಡೆದು ಕಾಂಗರೂ ಪಡೆ ಕಾಡಿದ್ದರು.
ಪೂಜಾರ ಅರ್ಧಶತಕದ ಆಸರೆ: 88 ರನ್ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ಅನ್ನು ಟೀಂ ಇಂಡಿಯಾದ ಆಸೀಸ್ ಬೌಲರ್ಗಳ ದಾಳಿ ತತ್ತರಿಸಿತು. ಆದರೆ, ಚೇತೇಶ್ವರ ಪೂಜಾರ 142 ಎಸೆತಗಳನ್ನು ಎದುರಿಸಿ, ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್ನೊಂದಿಗೆ 59 ರನ್ಗಳನ್ನು ಕಲೆ ಹಾಕಿ ತಂಡಕ್ಕೆ ಆಸರೆಯಾದರು. ಅಲ್ಲದೇ, ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.