ಹೈದರಾಬಾದ್:ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಹೋರಾಟದಿಂದ ಆಸ್ಟ್ರೇಲಿಯಾ ವಿರುದ್ಧದ 3ನೇ, ಅಂತಿಮ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಸರಣಿಯನ್ನು 2-1 ಅಂತರದಲ್ಲಿ ಕೈ ವಶ ಮಾಡಿಕೊಂಡಿತು.
ಆಸ್ಟ್ರೇಲಿಯಾ ನೀಡಿದ 186 ರನ್ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ಕೆಎಲ್ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾರನ್ನು ಬೇಗನೆ ಕಳೆದುಕೊಂಡಿತು. ಬಳಿಕ ಒಂದಾದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಗೆಲುವಿನ ಇನಿಂಗ್ಸ್ ಕಟ್ಟಿದರು.
ಸೂರ್ಯ, ವಿರಾಟ್ ಅರ್ಧಶತಕ:ಆಸ್ಟ್ರೇಲಿಯಾ ಬೌಲರ್ಗಳ ಬೆವರಿಳಿಸಿದ ಇಬ್ಬರು ಆಟಗಾರರು 103 ರನ್ಗಳ ಜೊತೆಯಾಟವಾಡಿದರು. ಕಳೆದೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿ 33 ನೇ ಅರ್ಧಶತಕ ಸಿಡಿಸಿದರು. 4 ಸಿಕ್ಸರ್, 3 ಬೌಂಡರಿ ಸಮೇತ ಕೊಹ್ಲಿ 63 ರನ್ ಗಳಿಸಿದರು.
ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತಿದರು. 5 ಬೌಂಡರಿ, 5 ಸಿಕ್ಸರ್ ಸಮೇತ 69 ರನ್ ಗಳಿಸಿದರು. ಸೂರ್ಯಕುಮಾರ್ ಔಟಾದ ಬಳಿಕ ಕೊನೆಯಲ್ಲಿ ಸಿಡಿದ ಹಾರ್ದಿಕ್ ಪಾಂಡ್ಯಾ 25 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ವಿರಾಟ್ ಕೊಹ್ಲಿ ಮೀರಿದ ರೋಹಿತ್:ಇನ್ನು ಆಸೀಸ್ ವಿರುದ್ಧದ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು 2-1 ರಲ್ಲಿ ಜಯಿಸಿದರೆ, ನಾಯಕ ರೋಹಿತ್ ಶರ್ಮಾ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿದರು. ನಾಯಕನಾಗಿ ರೋಹಿತ್ ಶಮಾ 33 ಗೆಲುವು ಸಾಧಿಸಿದರೆ, ವಿರಾಟ್ ಕೊಹ್ಲಿ 32 ಪಂದ್ಯಗಳಲ್ಲಿ ಗೆದ್ದಿದ್ದರು. ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋನಿ 42 ಪಂದ್ಯಗಳಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ. ಆಸೀಸ್ ಪರವಾಗಿ ಡೇನಿಯಲ್ ಸ್ಯಾಮ್ಸ್ 2, ಜೋಶ್ ಹೇಜಲ್ವುಡ್, ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.