ಚೆನ್ನೈ (ತಮಿಳುನಾಡು):ಆತಿಥೇಯ ಭಾರತ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡ ಏಕದಿನ ಸರಣಿ ಗೆದ್ದಿದೆ. ಇಂದು ನಡೆದ ಅಂತಿಮ ಪಂದ್ಯದಲ್ಲಿ 21 ರನ್ನಿಂದ ಗೆದ್ದು 2-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. 270 ರನ್ಗಳ ಗುರಿ ಬೆನ್ನಟ್ಟಿದ್ದ ರೋಹಿತ್ ಶರ್ಮಾ ಪಡೆ 49.1 ಓವರ್ಗೆ 248 ರನ್ ಮಾತ್ರ ಕಲೆ ಹಾಕಿ ಸೋಲೊಪ್ಪಿಕೊಂಡಿತ್ತು.
ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿ ಸ್ಮಿತ್ ಪಡೆ ಭಾರತದ ದಾಳಿಯನ್ನು ತಾಳ್ಮೆಯಿಂದ ಎದುರಿಸಿದರೂ 49 ಓವರ್ಗೆ ಸರ್ವಪತನ ಕಂಡು 269 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ತಾಳ್ಮೆಯ ಆಟ ನಡುವೆಯೂ ಉತ್ತಮ ಆರಂಭವನ್ನು ಪಡೆಯಿತು.
ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ಗೆ 65 ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು. ಅದರಲ್ಲೂ ರೋಹಿತ್ 17 ಎಸೆತಗಳನ್ನು ಎದುರಿಸಿ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿಗಳ ಸಮೇತ 30 ಬಾರಿಸಿದರು. ನಂತ ಗಿಲ್ 49 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಗಳ ನೆರವಿನೊಂದಿಗೆ 37 ರನ್ ಸಿಡಿಸಿ ಔಟಾದರು.
ನಂತರಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕೂಡ ತಾಳ್ಮೆ ಆಟವಾಡಿದರು. ರಾಹುಲ್ 32 ರನ್ ಹಾಗೂ ಕೊಹ್ಲಿ 54 ರನ್ ವಿಕೆಟ್ ಒಪ್ಪಿಸಿದರು. ಇದರ ನಂತರ ಬಂದ ಹಾರ್ದಿಕ್ ಪಾಂಡ್ಯ ಕೂಡ 40 ರನ್ ಕೊಡುಗೆ ನೀಡಿದರು. ಆದರೆ, ಸೂರ್ಯ ಕುಮಾರ್ ಯಾದವ್ ಈ ಪಂದ್ಯದಲ್ಲೂ ಶೂನ್ಯಕ್ಕೆ ನಿರ್ಗಮಿಸಿದರು. ರವೀಂದ್ರ 18 ರನ್ ಗಳಿಸಿ ಔಟಾದ ಗೆಲುವಿನ ನಿರೀಕ್ಷೆ ಹುಸಿಯಾಯಿತು. ಕುಲ್ದೀಪ್ ಯಾದವ್ (6), ಮೊಹಮ್ಮದ್ ಶಮಿ (10) ಮತ್ತು ಮೊಹಮ್ಮದ್ ಸಿರಾಜ್ (3*) ಮಾತ್ರ ಬಾರಿಸಿದರು.
ಆಸ್ಟ್ರೇಲಿಯಾ ತಂಡದ ಪರ ಆಡಮ್ ಝಂಪಾ 4 ವಿಕೆಟ್ ಪಡೆದು ಮಿಂಚಿದರು. ಆಷ್ಟನ್ ಅಗರ್ 2 ವಿಕೆಟ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಸೀನ್ ಅಬಾಟ್ ತಲಾ ವಿಕೆಟ್ ಪಡೆದರು.
ಆಸೀಸ್ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ಸ್ಮಿತ್ ನಿರ್ಣಯಕ್ಕೆ ತಕ್ಕಂತೆ ಬೃಹತ್ ಮೊತ್ತ ಕಲೆ ಹಾಕುವಲ್ಲಿ ತಂಡ ಎಡವಿತ್ತು. ಆರಂಭಿಕ 68 ರನ್ನ ಜೊತೆಯಾಟ ಬಿಟ್ಟರೆ ಮತ್ತಾವ ಜೋಡಿ ಬೃಹತ್ ರನ್ ಕಲೆ ಹಾಕಲಿಲ್ಲ. ಎಲ್ಲ ಆಟಗಾರರು 20 ಮತ್ತು 30 ರನ್ ಗಳಿಕೆಗೆ ವಿಕೆಟ್ ಒಪ್ಪಿಸಿದರು.
ಆಸೀಸ್ ಆರಂಭಿಕ ಆಟಗಾರರು ಉತ್ತಮ ಬ್ಯಾಟಿಂಗ್ ಮಾಡಿ 10 ಓವರ್ಗೆ ತಂಡದ ಮೊತ್ತವನ್ನು 60ಕ್ಕೆ ತಲುಪಿಸಿದ್ದರು. ಇದೇ ರನ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಲ್ಲಿ ತಂಡ ಮೊತ್ತ 350ರ ಹತ್ತಿಕ್ಕೆ ಹೋಗಬೇಕಿತ್ತು. ಆದರೆ ಆರಂಭಿಕ 68 ರನ್ನ ಜೊತೆಯಾಟದ ನಂತರ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲ.
ಟ್ರಾವಿಸ್ ಹೆಡ್ 33 ರನ್ ಗಳಿಸಿ ಆಡುತ್ತಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೆ ನಾಯಕ ಸ್ಟೀವ್ ಸ್ಮಿತ್ ಶೂನ್ಯಕ್ಕೆ ವಿಕೆಟ್ ನೀಡಿದರು. 47 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ 3 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಡೆವಿಡ್ ವಾರ್ನರ್ 23ಕ್ಕೆ ಪೆವಿಲಿಯನ್ ಹಾದಿ ಹಿಡಿದರೆ, ಲಬುಶೇನ್ 28ಕ್ಕೆ ಔಟ್ ಆದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 46 ಬಾಲ್ ಎದುರಿಸಿ 38 ರನ್ ಗಳಿಸಿದರು. ಮಾರ್ಕಸ್ ಸ್ಟೊಯಿನಿಸ್ 25 ಮತ್ತು ಸೀನ್ ಅಬಾಟ್ 26 ರನ್ನ ಕೊಡುಗೆ ನೀಡಿದರು. ಆಶ್ಟನ್ ಅಗರ್ 17 ಮತ್ತು ಮಿಚೆಲ್ ಸ್ಟಾರ್ಕ್ 10 ರನ್ ಗಳಿಸಿದರು.
ಭಾರತದ ಪರ ಉಪನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಯಾವ ಆಟಗಾರನು 50+ ರನ್ ಗಳಿಸದೇ ದಾಖಲಾದ ನಾಲ್ಕನೇ ಹೆಚ್ಚಿನ ಗುರಿ:ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರಮಿಚೆಲ್ ಮಾರ್ಷ್ 47ರನ್ ಗಳಿಸಿದ್ದು ಬಿಟ್ಟರೆ ಮತ್ತಾರು 40+ ಮೊತ್ತ ಕಲೆಹಾಕಲಿಲ್ಲ. ಹೀಗಿದ್ದರು ಆಸ್ಟ್ರೇಲಿಯಾ 250+ ರನ್ ಗುರಿ ನೀಡಿದೆ. ಇದಕ್ಕೂ ಮೊದಲು 2006ರಲ್ಲಿ ಮ್ಯಾನ್ಚೆಸ್ಟರ್ನಲ್ಲಿ ಇಂಗ್ಲೆಂಡ್-ಶ್ರೀಲಂಕಾ ಪಂದ್ಯದಲ್ಲಿ 285 ರನ್ ಗುರಿ ನೀಡಲಾಗಿತ್ತು. 2004/05ರ ಪಾಕಿಸ್ತಾನ - ವೆಸ್ಟ್ ಇಂಡೀಸ್ ಸರಣಿಯಲ್ಲಿ 9 ವಿಕೆಟ್ನಷ್ಟದಲ್ಲಿ 281 ಗುರಿ ನೀಡಲಾಗಿತ್ತು. 2006/07 ರ ನೆದರ್ಲ್ಯಾಂಡ್ - ಕೆನಡಾ ನಡುವಣ ಪಂದ್ಯದಲ್ಲಿ 8 ವಿಕೆಟ್ ಕಳೆದು ಕೊಂಡು 271 ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಆಲ್ಔಟ್ ಆಗಿ 269 ರನ್ ಗುರಿ ನೀಡಿದ್ದಾರೆ.
ಇದನ್ನೂ ಓದಿ:IND vs AUS 3rd ODI: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮಿತ್, ಬ್ಯಾಟಿಂಗ್ ಆಯ್ಕೆ