ಚೆನ್ನೈ:ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಇಂದು ನಡೆಯುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಕಾಂಗರೂ ಪಡೆಯಲ್ಲಿ ಕೆಲವು ಬದಲಾವಣೆಗಳಾಗಿದ್ದು, ಆರಂಭಿಕ ಡೇವಿಡ್ ವಾರ್ನರ್ ಚೇತರಿಸಿಕೊಂಡು ತಂಡ ಸೇರಿದ್ದಾರೆ. ಕ್ಯಾಮರಾನ್ ಗ್ರೀನ್ ಅನಾರೋಗ್ಯದ ಕಾರಣ ಹೊರಗಿದ್ದಾರೆ. ಸ್ಪಿನ್ ಪಿಚ್ ಸಲುವಾಗಿ ಆಷ್ಟನ್ ಅಗರ್ ತಂಡ ಸೇರಿಕೊಂಡಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಏಕದಿನ ವಿಶ್ವಕಪ್ಗೆ ತಯಾರಿ:ಭಾರತದಲ್ಲಿ ಈ ವರ್ಷ ನಡೆಯಲಿರುವ ವಿಶ್ವಕಪ್ಗೆ ಎರಡೂ ತಂಡಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಈ ಟೂರ್ನಿಯನ್ನು ಪೂರ್ವಭಾವಿ ತಯಾರಿಗಾಗಿ ಬಳಸಿಕೊಳ್ಳುತ್ತಿವೆ. ಆದರೆ, ಕಳೆದೆರಡು ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ವೈಫಲ್ಯ ಕಂಡಿವೆ. ವೇಗಿಗಳ ದಾಳಿಗೆ ತಂಡಗಳ ಅಲ್ಪಮೊತ್ತಕ್ಕೆ ಕುಸಿತ ಕಂಡಿವೆ. ಇಂದಿನ ಪಂದ್ಯ ಸರಣಿ ಗೆಲುವಿಗೆ ನಿರ್ಣಾಯಕವಾಗಿದ್ದು ಇತ್ತಂಡಗಳಿಗೂ ಪ್ರಮುಖವಾಗಿದೆ.
ಮುಂದಿನ 5 ತಿಂಗಳು ಏಕದಿನದಿಂದ ಭಾರತ ದೂರ:ಇಂದಿನ ಪಂದ್ಯದ ನಂತರ ಭಾರತ ಇನ್ನು ಐದು ತಿಂಗಳ ಕಾಲ ಏಕದಿನ ಪಂದ್ಯ ಆಡುವುದಿಲ್ಲ. ತಂಡವು ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ತೆರಳುವವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಭಾಗಿಯಾಗುವುದಿಲ್ಲ. ಪ್ರಸ್ತುತ ಸರಣಿಯ ನಂತರ ಐಪಿಎಲ್ ನಡೆಯಲಿದ್ದು, ಜೂನ್ 7ಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಭಾಗಿಯಾಗಲಿದೆ. ಹೀಗಾಗಿ ತಂಡ ನಿರ್ಣಯಕ್ಕೆ ಸರಣಿಯ ಆಟಗಳು ಮಹತ್ವ ಪಡೆದಿದ್ದವು.
ಸೂರ್ಯಕುಮಾರ್ ಯಾದವ್ ಮೇಲೆ ಒತ್ತಡ:ಸತತ ಎರಡು ಪಂದ್ಯಗಳಿಂದ ಸೊನ್ನೆ ಸುತ್ತಿದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಸಾಮರ್ಥ್ಯ ತೋರಿಸಬೇಕಿದೆ. ಏಕದಿನದಲ್ಲಿ ಅವರ ಭವಿಷ್ಯ ಇದೇ ಪಂದ್ಯದಲ್ಲಿ ನಿರ್ಣಯ ಆಗುವ ಸಾಧ್ಯತೆಯೂ ಇದೆ. ಮತ್ತೆ ವೈಫಲ್ಯ ಕಂಡಲ್ಲಿ ಕೇವಲ ಟಿ20 ತಂಡದಲ್ಲಿ ಮಾತ್ರ ಉಳಿದುಕೊಳ್ಳುವ ಸಾಧ್ಯತೆ ಇದೆ.