ರಾಜ್ಕೋಟ್ (ಗುಜರಾತ್):ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 66 ರನ್ ಗಳಿಂದ ಸೋಲು ಕಂಡಿದೆ. ಇದರಿಂದ ಐತಿಹಾಸಿಕ ಕ್ಲೀನ್ಸ್ವೀಪ್ ಸಾಧನೆ ವಿಫಲವಾಗಿದ್ದು, ಸರಣಿ 2-1 ರಿಂದ ಭಾರತದ ಕೈಸೇರಿದೆ. ಕಾಂಗರೂ ಪಡೆ ಕೊಟ್ಟಿದ್ದ 353 ರನ್ ಗುರಿ ಬೆನ್ನತ್ತಿದ ಭಾರತೀಯ ತಂಡ 49.4 ಓವರ್ಗೆ 286 ರನ್ಗೆ ಆಲ್ಔಟ್ ಆಯಿತು. ಆಸ್ಟ್ರೇಲಿಯಾದ ಪಾರ್ಟ್ ಟೈಂ ಬೌಲರ್ ಮ್ಯಾಕ್ಸ್ವೆಲ್ ಭಾರತಕ್ಕೆ ಮುಳುವಾದರು.
ವಿಶ್ವಕಪ್ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಕಳೆದೆರಡು ಪಂದ್ಯಗಳಿಗೆ ವಿಶ್ರಾಂತಿ ಕೊಡಲಾಗಿತ್ತು. ಕೊನೆಯ ಪಂದ್ಯಕ್ಕೆ ಈ ಇಬ್ಬರು ಬ್ಯಾಟರ್ ಬಂದ ಕಾರಣ ಇಂದಿನ ತಂಡದಲ್ಲಿ ಬ್ಯಾಟಿಂಗ್ ಬಲವನ್ನು ಕುಗ್ಗಿಸಿ ಬೌಲಿಂಗ್ಗೆ ಹೆಚ್ಚು ಒತ್ತು ಕೊಡಲಾಯಿತು. ಭಾರತದ ಮೂವರು ವೇಗಿಗಳು ಮತ್ತು ಮೂವರು ಸ್ಪಿನ್ನರ್ಗಳು ರಾಜ್ಕೋಟ್ನ ಹೈವೆ ಪಿಚ್ನಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿಹಾಕುವಲ್ಲಿ ವಿಫಲವಾದರು. ಇದರಿಂದ ಬೃಹತ್ ಗುರಿ ಭಾರತ ಎದುರಿಸಬೇಕಾಯಿತು.
ವಿಶ್ವಕಪ್ಗೂ ಮೊದಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಇಳಿಸಲಾಯಿತು. ನಾಯಕ ರೋಹಿತ್ ಮತ್ತು ಸುಂದರ್ ಬೃಹತ್ ಗುರಿಯನ್ನು ಭೇದಿಸಲು ಸರಿಯಾದ ವೇಗದ ಆರಂಭವನ್ನು ಕೊಡಲಿಲ್ಲ. ಬದಲಾಗಿ ಮೊದಲ ಪವರ್ ಪ್ಲೇಯಲ್ಲಿ ಇಬ್ಬರು ವಿಕೆಟ್ ಕಾಯ್ದುಕೊಳ್ಳುವ ಕೆಲಸ ಮಾಡಿದರು. ವಾಷಿಂಗ್ಟನ್ ಸುಂದರ್ ಟೆಸ್ಟ್ನ ನೈಟ್ ವಾಚ್ಮನ್ ರೀತಿ ಬ್ಯಾಟಿಂಗ್ ಮಾಡಿದರು. ಮೊದಲ ವಿಕೆಟ್ಗೆ 74 ರನ್ ಜೊತೆಯಾಟ ಬಂದರೂ ಅದರಲ್ಲಿ ರೋಹಿತ್ ಪಾಲುದಾರಿಕೆ ಹೆಚ್ಚಿತ್ತು. ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ 30 ಬಾಲ್ ಎದುರಿಸಿ 18 ರನ್ ಗಳಿಸಿ ಆಡುತ್ತಿದ್ದ ಸುಂದರ್ ವಿಕೆಟ್ ಒಪ್ಪಿಸಿದರು.
ವಾಷಿಂಗ್ಟನ್ ನಂತರ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ 50ಕ್ಕೂ ಹೆಚ್ಚು ರನ್ನ ಪಾಲುದಾರಿಕೆ ಮಾಡಿದರಾದರೂ ರನ್ನ ವೇಗವನ್ನು ಹೆಚ್ಚಿಸುವಲ್ಲಿ ವಿಫಲರಾದರು. ಇದರಿಂದ ರನ್ರೇಟ್ನ ಅಗತ್ಯತೆ ಹೆಚ್ಚಾಗುತ್ತಾ ಬಂತು. ನಾಯಕ ರೋಹಿತ್ ಶರ್ಮಾ 19 ರನ್ನಿಂದ ಶತಕ ವಂಚಿತರಾದರು. ಇನ್ನಿಂಗ್ಸ್ನಲ್ಲಿ ಅವರು 57 ಬಾಲ್ ಆಡಿ 5 ಬೌಂಡರಿ ಮತ್ತು 6 ಸಿಕ್ಸ್ನಿಂದ 81 ರನ್ ಕಲೆಹಾಕಿ ಮ್ಯಾಕ್ಸ್ವೆಲ್ಗೆ ವಿಕೆಟ್ ಕೊಟ್ಟರು.