ನವದೆಹಲಿ:ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪೈಪೋಟಿಯತ್ತ ಸಾಗುತ್ತಿದೆ. ನಾಥನ್ ಲಿಯಾನ್ ಮಾರಕ ಸ್ಪಿನ್ ದಾಳಿಗೆ ಬ್ಯಾಟಿಂಗ್ ವೈಫಲ್ಯದಿಂದ ಭಾರತ 262 ರನ್ಗಳಿಗೆ ಆಲೌಟ್ ಆಯಿತು. 2ನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. 2ನೇ ದಿನದಾಟದ ಮುಕ್ತಾಯದ ವೇಳೆಗೆ ಆಸೀಸ್ 1 ವಿಕೆಟ್ಗೆ 61 ರನ್ ಗಳಿಸಿದೆ.
2ನೇ ದಿನದಾಟದ ಕೊನೆಯಲ್ಲಿ ಭಾರತವನ್ನು ಆಸೀಸ್ ಪಡೆ ಆಲೌಟ್ ಮಾಡಿತು. ಮೊದಲ ದಿನದಲ್ಲಿ ನಾಯಕ ರೋಹಿತ್ ಶರ್ಮಾ 13 ರನ್, ಉಪನಾಯಕ ಕೆಎಲ್ ರಾಹುಲ್ 04 ರನ್ಗಳೊಂದಿಗೆ ಇನಿಂಗ್ಸ್ ಆರಂಭಿಸಿದರು. ಬ್ಯಾಟಿಂಗ್ ವೂಫಲ್ಯ ಅನುಭವಿಸುತ್ತಿರುವ ರಾಹುಲ್ ಮತ್ತೆ ವಿಫಲರಾದರು. 17 ರನ್ ಗಳಿಸಿದ್ದಾಗ ನಾಥನ್ ಲಿಯಾನ್ ಸ್ಪಿನ್ಗೆ ಮೊದಲ ಬಲಿಯಾದರು. ಬಳಿಕ ಮೊದಲ ಟೆಸ್ಟ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ರೋಹಿತ್ 32 ರನ್ಗೆ ವಿಕೆಟ್ ನೀಡಿದರು.
ಭಾರತದ ಪರವಾಗಿ 100 ನೇ ಟೆಸ್ಟ್ ಆಡುತ್ತಿರುವ ಚೇತೇಶ್ವರ್ ಪೂಜಾರ 7 ಎಸೆತ ಎದುರಿಸಿ ಸೊನ್ನೆಗೆ ಔಟಾದರು. ಹಿಂದಿನ ಸರಣಿಗಳಲ್ಲಿ ಮಿಂಚಿದ್ದ ಶ್ರೇಯಸ್ ಖದರ್ ಕಳೆದುಕೊಂಡು 4 ರನ್ಗೆ ಸುಸ್ತಾದರು. ಮೊದಲ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ್ದ ಬ್ಯಾಟಿಂಗ್ ವಿರಾಟ್ ಕೊಹ್ಲಿ ಇಂದು ಉತ್ತಮವಾಗಿ ಬ್ಯಾಟ್ ಬೀಸಿದರು. 84 ಎಸೆತಗಳಲ್ಲಿ 44 ರನ್ ಮಾಡಿ ಆಡುತ್ತಿದ್ದಾಗ ಖುನೆಮನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದು ಅರ್ಧಶತಕದಿಂದ ವಂಚಿತರಾದರು. ಮೊದಲ ಟೆಸ್ಟ್ನ ಹೀರೋ ರವೀಂದ್ರ ಜಡೇಜಾ 26 ರನ್ ಮಾಡಿ ಪ್ರತಿರೋಧ ಒಡ್ಡಿದರಾದರೂ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ವಿಕೆಟ್ ಕೀಪರ್ ಶ್ರೀಕರ್ ಭಟ್ 6 ರನ್ಗೆ ವಿಕೆಟ್ ನೀಡಿ ವೈಫಲ್ಯ ಮುಂದುವರಿಸಿದರು.
ಅಕ್ಷರ್- ಅಶ್ವಿನ್ ಜುಗಲ್ಬಂದಿ:ಒಂದು ಹಂತದಲ್ಲಿ 139 ರನ್ಗೆ 7 ವಿಕೆಟ್ ಕಳೆದುಕೊಂಡು ತೀವ್ರ ಕುಸಿತದಲ್ಲಿದ್ದ ಭಾರತ 200 ರ ಗಡಿದಾಟುವುದು ಕಷ್ಟವಾಗಿತ್ತು. ಈ ವೇಳೆ ಜೊತೆಯಾದ ಸ್ಪಿನ್ ದ್ವಯರಾದ ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ಸೊಗಸಾದ ಇನಿಂಗ್ಸ್ ಕಟ್ಟಿದರು. ಶತಕದ ಜೊತೆಯಾಟವಾಡಿದ ಜೋಡಿ 113 ರನ್ ಗಳಿಸಿದರು.
ಇದರಿಂದ ತಂಡ 250 ರನ್ ಗಡಿ ದಾಟಿತು. ಬಿರುಸಾಗಿ ಬ್ಯಾಟ್ ಮಾಡಿದ ಅಕ್ಷರ್ 115 ಎಸೆತಗಳಲ್ಲಿ 9 ಬೌಂಡರಿ 32 ಸಿಕ್ಸರ್ ಸಮೇತ 74 ರನ್ ಮಾಡಿದರು. ಅಶ್ವಿನ್ 37 ರನ್ ಮಾಡಿ ಸಾಥ್ ನೀಡಿದರು. ಇಬ್ಬರೂ ಔಟಾದ ಬಳಿಕ ಬಾಲಂಗೋಚಿಗಳು ಬೇಗನೇ ನಿರ್ಗಮಿಸುವುದರ ಮೂಲಕ ಭಾರತ 83.3 ಓವರ್ಗಳಲ್ಲಿ 262 ರನ್ಗೆ ಇನಿಂಗ್ಸ್ ಮುಗಿಸಿತು. 1 ರನ್ ಹಿನ್ನಡೆ ಅನುಭವಿಸಿತು.