ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ನಾಗ್ಪುರ ಟೆಸ್ಟ್‌ನಲ್ಲಿ ಕಾಂಗರೂಗಳನ್ನು ಸೋಲಿಸಿದ ನಂತರ, ರೋಹಿತ್ ಶರ್ಮಾ ಬಳಕ ದೆಹಲಿಯಲ್ಲೂ ಪ್ರವಾಸಿಗರನ್ನು ಸೋಲಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಕಣ್ಣಿಟ್ಟಿದ್ದಾರೆ.
ದೆಹಲಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಹಲವು ರೀತಿಯಲ್ಲಿ ವಿಶೇಷವಾಗಿರುತ್ತದೆ. ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆಯಲಿದ್ದು, ಈ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಹತ್ತಿರವಾಗಲಿದೆ. ಭಾರತ ಪ್ರಸ್ತುತ WTC ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸರಣಿಯಲ್ಲಿ ಪುನರಾಗಮನದ ಮೇಲೆ ಕಣ್ಣಿಟ್ಟಿದೆ.
ಆಸ್ಟ್ರೇಲಿಯಾ ಮತ್ತು ಭಾರತ (IND vs AUS) ನಡುವೆ ಒಟ್ಟು 103 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ, ಇದರಲ್ಲಿ ಆಸ್ಟ್ರೇಲಿಯಾವು ಮೇಲುಗೈ ಹೊಂದಿದೆ. ಆಸ್ಟ್ರೇಲಿಯಾ ತಂಡ 43ರಲ್ಲಿ ಗೆದ್ದಿದ್ದರೆ, ಭಾರತ 31 ಪಂದ್ಯಗಳನ್ನು ಗೆದ್ದಿದೆ. ಇಬ್ಬರ ನಡುವೆ 28 ಡ್ರಾ ನಡೆದಿದ್ದು, ಒಂದು ಪಂದ್ಯ ಟೈ ಆಗಿದೆ. ಆದರೆ, ಭಾರತ ತಂಡ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇವರಿಬ್ಬರ ನಡುವೆ ಭಾರತದ ನೆಲದಲ್ಲಿ 51 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 22 ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ 13 ಪಂದ್ಯಗಳನ್ನು ಗೆದ್ದಿದ್ದು, ಉಭಯ ತಂಡಗಳ ನಡುವೆ 15 ಪಂದ್ಯಗಳು ಡ್ರಾ ಆಗಿದ್ದರೆ, ಒಂದು ಪಂದ್ಯ ಟೈ ಆಗಿದೆ.
ಚೇತೇಶ್ವರ ಪೂಜಾರ್ಗೆ 100 ಟೆಸ್ಟ್ ಪಂದ್ಯ:ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಆಡಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ 13 ನೇ ಭಾರತೀಯ ಆಟಗಾರನಾಗಲಿದ್ದಾರೆ. ಈ ಟೆಸ್ಟ್‌ನಲ್ಲಿ ಪೂಜಾರ ಶತಕ ಸಿಡಿಸಿದರೆ, 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಶ್ವದ 10 ಬ್ಯಾಟ್ಸ್‌ಮನ್‌ಗಳು ಮಾತ್ರ 100ನೇ ಟೆಸ್ಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್‌ನ ಕಾಲಿನ್ ಕೌಡ್ರೆ 100ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಕ್ರಿಕೆಟಿಗ.