ವಿಶಾಖಪಟ್ಟಣಂ:ವಿಶ್ವಕಪ್ನ ತಯಾರಿ ಎಂದೇ ಕರೆಸಿಕೊಳ್ಳುತ್ತಿರುವ ಪಂದ್ಯದಲ್ಲಿ ಭಾರತ ಕಳೆಪೆ ಬ್ಯಾಟಿಂಗ್ ಪ್ರದರ್ಶಿಸಿ 117ಕ್ಕೆ ಸರ್ವಪತನ ಕಂಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ ಸುಲಭವಾಗಿ ಗುರಿ ತಲುಪಿದೆ. ಈ ಮೂಲಕ ಸರಣಿ 1-1ರಿಂದ ಸಮಬಲವಾಗಿದೆ. ತವರಿನಲ್ಲಿ 8ನೇ ಸರಣಿ ವಶಕ್ಕೆ ಚಿಂತಿಸಿದ್ದ ಭಾರತದ ಲೆಕ್ಕಾಚಾರ ತಲೆಕೆಳಗಾಗಿದೆ.
ಟಾಸ್ ಗೆದ್ದು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಈ ನಿರ್ಧಾರವನ್ನು ಆಸಿಸ್ ಬೌಲರ್ಗಳು ಸಮರ್ಥಿಸಿಕೊಂಡಿದ್ದಾರೆ. ಕಾಂಗರೂ ಪಡೆಯ ಮಿಚಲ್ ಸ್ಟಾರ್ಕ್ ದಾಳಿಗೆ ಭಾರತದ ಪ್ರಮುಖ ಐವರು ವಿಕೆಟ್ ಒಪ್ಪಿಸಿ, ಪೆವಿಲಿಯನ್ ಹಾದಿ ಹಿಡಿದಿದ್ದರು. 118 ರನ್ ಗುರಿಯನ್ನು ಆಸ್ಟ್ರೇಲಿಯಾಕ್ಕೆ ಭಾರತ ನೀಡಿತ್ತು. ಇದನ್ನು ಬೆನ್ನತ್ತಿದ ಆಸಿಸ್ 10 ವಿಕೆಟ್ಗಳ ಗೆಲುವು ಸಾಧಿಸಿತು.
ಆಸಿಸ್ ಆರಂಭಿಕರಾದ ಟ್ರಾವಿಸ್ ಹೆಡ್ 51 ರನ್ ಮತ್ತು ಮಿಚೆಲ್ ಮಾರ್ಷ್ 66 ರನ್ ಗಳಸಿ ಗೆಲುವಿಗೆ ಕಾರಣರಾದರು. ಆಸಿಸ್ ಪಡೆ ಮೇಲೆ ಭಾರತೀಯ ಬೌಲಿಂಗ್ ಪಡೆ ಯಾವುದೇ ಪರಿಣಾಮ ಬೀರಲಿಲ್ಲ. ಮಾರ್ಷ ಭಾರತದ ವಿರುದ್ಧ ಉತ್ತಮ ಟ್ರ್ಯಾಕ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ 102*, 81 ಮತ್ತು ಇಂದು 66* ರನ್ ಗಳಿಸಿದ್ದಾರೆ.
ಭಾರತದ ಇನ್ನಿಂಗ್ಸ್:ಸ್ಟಾರ್ಕ್ ಭಾರತದ ಪ್ರಮುಖ ಐದು ವಿಕೆಟ್ಗಳನ್ನು ಕಬಳಿಸಿದರು. ಶುಭಮನ್ ಗಿಲ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್ ಮತ್ತು ಕೊನೆಯ ಸಿರಾಜ್ ವಿಕೆಟ್ ಸಹ ಪಡೆದರು. ಭಾರತದ ಪರ ವಿರಾಟ್ ಕೊಹ್ಲಿ 31, ಅಕ್ಷರ್ ಪಟೇಲ್ 29, ರವೀಂದ್ರ ಜಡೇಜ 16 ಮತ್ತು ನಾಯಕ ರೋಹಿತ್ ಶರ್ಮಾ 13 ರನ್ ದೊಡ್ಡ ಮೊತ್ತಗಳಾಗಿವೆ. 26 ಓವರ್ಗೆ 117 ರನ್ ಗಳಿಸಿ ಭಾರತ ಆಲ್ಔಟ್ ಆಯಿತು.
ಮಿಚೆಲ್ ಸ್ಟಾರ್ಕ್ ಮೊದಲ ಓವರ್ನ ಮೂರನೇ ಎಸೆತದಲ್ಲೇ ಶುಭಮನ್ ಗಿಲ್ ಅವರ ವಿಕೆಟ್ ಕಬಳಿಸಿದರು. ಅವರ ಬೆನ್ನಲ್ಲೇ 5ನೇ ಓವರ್ನಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ (0) ವಿಕೆಟ್ ಒಪ್ಪಿಸಿದರು. 9ನೇ ಓವರ್ನಲ್ಲಿ ಕೆಎಲ್ ರಾಹುಲ್ (9) ಸ್ಟಾರ್ಕ್ಗೆ ವಿಕೆಟ್ ಕೊಟ್ಟರು. ಸೀನ್ ಅಬಾಟ್ ಉಪನಾಯಕ ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಮತ್ತು ಶಮಿ ವಿಕೆಟ್ ಪಡೆದರು. ಭಾರತಕ್ಕೆ ಆಸರೆಯಾಗಿ ಆಡುತ್ತಿದ್ದ ಜಡೇಜ ಮತ್ತು ವಿರಾಟ್ ವಿಕೆಟ್ನ್ನು ನಾಥನ್ ಎಲ್ಲಿಸ್ ಕಬಳಿಸಿದರು. ಹತ್ತು ಬ್ಯಾಟರ್ಗಳಲ್ಲಿ ನಾಲ್ವರು ಮಾತ್ರ ಎರಡಂಕಿಯನ್ನು ತಲುಪಿದರು. ಮಿಕ್ಕ ಆರು ಜನ ಒಂದಂಕಿಗೆ ಪೆವಿಲಿಯನ್ ಹಾದಿ ಹಿಡಿದರು. ಆಸಿಸ್ ಪರ ಸ್ಟಾರ್ಕ್ 5, ಸೀನ್ ಅಬಾಟ್ 3 ಮತ್ತು ನಾಥನ್ ಎಲ್ಲಿಸ್ 2 ವಿಕೆಟ್ ಪಡೆದರು.
ತವರಿನ ನಾಲ್ಕನೇ ಅತಿ ಕಡಿಮೆ ಸ್ಕೋರ್:ಭಾರತ ತಂಡ ತವರಿನಲ್ಲಿ ಅತಿ ಕಡಿಮೆ ಮೊತಕ್ಕೆ ಕುಸಿದ ನಾಲ್ಕನೇ ಮ್ಯಾಚ್ ಇದಾಗಿದೆ. ಈ ಹಿಂದೆ 1986 ರಲ್ಲಿ ಶ್ರೀಲಂಕಾ ವಿರುದ್ಧ 78 ರನ್ಗೆ ಕಾನ್ಪುರದಲ್ಲಿ, 1993ರಲ್ಲಿ 100 ರನ್ಗೆ ವೆಸ್ಟ್ ಇಂಡಿಸ್ ವಿರುದ್ಧ ಅಹಮದಾಬಾದ್ನಲ್ಲಿ, ಶ್ರೀಲಂಕಾ ವಿರುದ್ಧ 2017 ರಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ 112 ಕ್ಕೆ ಆಲ್ಔಟ್ ಆಗಿತ್ತು. ಇಂದು 117ಕ್ಕೆ ಆಸಿಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ಸರ್ವಪತನ ಕಂಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯ 3ನೇ ಅಲ್ಪ ಮೊತ್ತ:ಇಂಡಿಯಾ ಮತ್ತು ಆಸ್ಟ್ರೇಲಿಯಾದ ಎದುರಾದಾಗ ಅಲ್ಪ ಮೊತ್ತಕ್ಕೆ ಕುಸಿತ ಕಂಡ ಮೂರನೇ ಸ್ಕೋರ್ ಇದಾಗಿದೆ. ಈ ಮೊದಲು 1981ರಲ್ಲಿ ಸಿಡ್ನಿಯಲ್ಲಿ 63 ರನ್ಗೆ ಭಾರತ ಔಟ್ ಆಗಿತ್ತು. 2000ದಲ್ಲಿ ಸಿಡ್ನಿಯಲ್ಲಿ 100 ರನ್ಗೆ ಮತ್ತು ಇಂದು ವಿಶಾಖಪಟ್ಟಣಂನಲ್ಲಿ 117ಕ್ಕೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿದೆ.
ಆಸಿಸ್ ವಿರುದ್ಧ ಭಾರತದಲ್ಲಿ ಮೊದಲ ಅಲ್ಪ ಮೊತ್ತ:ಭಾರತ ಆಸ್ಟ್ರೇಲಿಯಾದಲ್ಲಿ 63 ಕ್ಕೆ ಮತ್ತು 100 ಕ್ಕೆ ಔಟ್ ಆಗಿದ್ದರು. ತವರು ನೆಲದಲ್ಲಿ ಆಸಿಸ್ ವಿರುದ್ಧ ಇಷ್ಟು ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದು ಪ್ರಥಮ ಬಾರಿಗೆ.
ಇದನ್ನೂ ಓದಿ:ಇಂದು ಆಸೀಸ್- ಭಾರತ 2ನೇ ಏಕದಿನ: ವಿಶ್ವಕಪ್ ತಯಾರಿ ಪಂದ್ಯಕ್ಕೆ ಮಳೆ ಆತಂಕ