ಇಂದೋರ್ (ಮಧ್ಯಪ್ರದೇಶ): ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 99 ರನ್ನಿಂದ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಭಾರತದ ಸ್ಪಿನ್ ಮೋಡಿಗೆ ಆಸ್ಟ್ರೇಲಿಯಾ ಮತ್ತೆ ಮಣಿದಿದೆ. ಅನುಭವಿ ಬೌಲರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ತಲಾ 3 ವಿಕೆಟ್ ಪಡೆದು ಕಾಂಗರೂ ಪಡೆಯನ್ನು ಎರಡನೇ ಏಕದಿನ ಪಂದ್ಯದಲ್ಲಿ 217ಕ್ಕೆ ಕಟ್ಟಿಹಾಕಿದರು. 28.2 ಓವರ್ಗೆ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸತತ ಐದನೇ ಏಕದಿನ ಪಂದ್ಯದ ಸೋಲನುಭವಿಸಿತು.
ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು 33 ಓವರ್ಗೆ ಕಡಿತಗೊಳಿಸಲಾಗಿತ್ತು. ಹೀಗಾಗಿ ಆಸ್ಟ್ರೇಲಿಯಾಕ್ಕೆ 317 ನವೀಕೃತ ಗುರಿ ಇತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಅವರ ಶತಕ ಮತ್ತು ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ 399 ರನ್ ಗಳಿಸಿತ್ತು.
ಈ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯಾಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆರಂಭಿಕ ಆಘಾತ ನೀಡಿದರು. ಪಂದ್ಯದ ಎರಡನೇ ಓವರ್ ಮಾಡಲು ಬಂದ ಅವರು ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್ ಅವರ ವಿಕೆಟ್ ಪಡೆದರು. ನಂತರ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಮೂರನೇ ವಿಕೆಟ್ಗೆ 80 ರನ್ ಜೊತೆಯಾಟ ಮಾಡಿ ತಂಡಕ್ಕೆ ಆಸರೆ ಆಗಿದ್ದರು. ಆದರೆ ಈ ವೇಳೆ ದಾಳಿಗೆ ಬಂದ ಅಶ್ವಿನ್ 34 ಬಾಲ್ನಲ್ಲಿ 4 ಬೌಂಡರಿಯ ಸಹಾಯದಿಂದ 27 ರನ್ ಗಳಿಸಿ ವಿಕೇಟ್ ಕಾಯ್ದುಕೊಂಡು ಆಡುತ್ತಿದ್ದ ಮಾರ್ನಸ್ ವಿಕೆಟ್ ಪಡೆದರು.
ಮಾರ್ನಸ್ ಔಟ್ ಆದ ಬೆನ್ನಲ್ಲೇ 12 ರನ್ ಅಂತರದಲ್ಲಿ ಮತ್ತೆರಡು ವಿಕೆಟ್ ಅಶ್ವಿನ್ ಪಾಲಾಯಿತು. 39 ಬಾಲ್ನಲ್ಲಿ 7 ಬೌಂಡರಿ, 1 ಸಿಕ್ಸ್ ನಿಂದ 53 ರನ್ ಗಳಿಸಿ ಆಡುತ್ತಿದ್ದ ವಾರ್ನರ್ ಎಲ್ಬಿಡ್ಲ್ಯೂಗೆ ಬಲಿಯಾದರು. ಆದರೆ ಅದು ಔಟ್ ಆಗಿರಲಿಲ್ಲ. ಅಂಪೈರ್ ನಿರ್ಧಾರಕ್ಕೆ ರಿವೀವ್ ಪಡೆಯದೇ ಪೆವಿಲಿಯನ್ಗೆ ಮರಳಿ ವಾರ್ನರ್ ದಡ್ಡತನ ಮೆರೆದರು. ಅವರ ಹಿಂದೆಯೇ ಜೋಶ್ ಇಂಗ್ಲಿಸ್ ವಿಕೆಟ್ ಕೊಟ್ಟರು.