ವಿಶಾಖಪಟ್ಟಣಂ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದು, ಆರಂಭಿಕ ಸ್ಥಾನದಲ್ಲಿ ಆಡುತ್ತಿದ್ದ ಇಶನ್ ಕಿಶನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಶಾರ್ದೂಲ್ ಠಾಕೂರ್ ಬದಲಿಗೆ ಸ್ಪಿನ್ ಬೌಲರ್ ಅಕ್ಷರ್ ಪಟೇಲ್ರನ್ನು ಕಣಕ್ಕಿಳಿಸಲಾಗಿದೆ.
ಆಸ್ಟ್ರೇಲಿಯಾ ಎರಡು ಬದಲಾವಣೆ ಮಾಡಿಕೊಂಡಿದೆ. ಗ್ಲೆನ್ ಮ್ಯಾಕ್ಸ್ವೆಲ್ ಬದಲಾಗಿ ನಾಥನ್ ಎಲ್ಲಿಸ್ ಹಾಗೂ ಇಂಗ್ಲಿಸ್ ಬದಲಾಗಿ ಅಲೆಕ್ಸ್ ಕ್ಯಾರಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮಳೆ ಸಾಧ್ಯತೆ ಇರುವುದರಿಂದ ಸಂಜೆಯ ವೇಳೆ ತೇವಾಂಶದ ಪಿಚ್ನ ಲಾಭ ಪಡೆಯಲು ಆಸೀಸ್ ನಾಯಕ ಎದುರು ನೋಡುತ್ತಿದ್ದಾರೆ.
ಭಾರತಕ್ಕೆ ತ್ರಿವಳಿ ಸ್ಪಿನ್ನರ್ಗಳು:ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಿಚ್ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಸಹಕಾರಿ. ಹೀಗಾಗಿ, ಮೂವರು ಸ್ಪಿನ್ನರ್ಗಳ ಜೊತೆ ಭಾರತ ಕಣಕ್ಕಿಳಿದಿದೆ. ಮಧ್ಯಮ ವೇಗದ ಬೌಲರ್ ಮತ್ತು ಬ್ಯಾಟರ್ ಶಾರ್ದೂಲ್ ಠಾಕೂರ್ ಬದಲಿಗೆ ಟೆಸ್ಟ್ನಲ್ಲಿ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್ಗೆ ಸ್ಥಾನ ನೀಡಲಾಗಿದೆ. ಇಂದು ಜಡೇಜಾ, ಅಕ್ಷರ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿದ್ದಾರೆ.
ಆಸಿಸ್ನಲ್ಲಿ ಐವರು ವೇಗಿಗಳು: ಇಬ್ಬರು ಆಲ್ರೌಂಡರ್ ಸೇರಿದಂತೆ ಐವರು ವೇಗಿಗಳೊಂದಿಗೆ ಆಸ್ಟ್ರೇಲಿಯಾ ತಂಡ ಮೈದಾನಕ್ಕಿಳಿದಿದೆ. ಆ್ಯಡಂ ಜಂಪಾ ಮಾತ್ರ ಸ್ಪಿನ್ನರ್ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಕ್ಯಾಮರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್ ಮತ್ತು ಮಿಚೆಲ್ ಸ್ಟಾರ್ಕ್ ವೇಗದ ಬೌಲಿಂಗ್ ಮಾಡಲಿದ್ದಾರೆ.