ನಾಗ್ಪುರ(ಮಹಾರಾಷ್ಟ್ರ):ಮೊದಲ ಟೆಸ್ಟ್ನ ಮೂರನೇ ದಿನದಾಟದಲ್ಲಿ ದೊಡ್ಡ ಮೊತ್ತ ಪೇರಿಸುವ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತವನ್ನು ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಟಾಡ್ ಮೊರ್ಪಿ ಮತ್ತೆ ಕಾಡಿದರು. ಇದರಿಂದ ಭಾರತ 139.3 ಓವರ್ಗಳಲ್ಲಿ 400 ರನ್ ಗಳಿಸಿ ಮೊದಲ ಇನಿಂಗ್ಸ್ ಮುಗಿಸಿತು. ಶತಕದ ಸನಿಹದಲ್ಲಿದ್ದ ಆಲ್ರೌಂಡರ್ ಅಕ್ಷರ್ ಪಟೇಲ್ ಔಟಾಗಿ ನಿರಾಸೆ ಅನುಭವಿಸಿದರು.
ನಿನ್ನೆ ಕ್ರೀಸ್ ಕಾಯ್ದುಕೊಂಡಿದ್ದ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ದೊಡ್ಡ ಮೊತ್ತ ಗಳಿಸುವ ಗುರಿಯೊಂದಿಗೆ ಮೂರನೇ ದಿನದಾಟ ಆರಂಭಿಸಿದರು. ಆದರೆ, ಆಸೀಸ್ ಮೊರ್ಪಿ ಆರಂಭದಲ್ಲೇ ಆಘಾತ ನೀಡಿದರು. 66 ರನ್ ಗಳಿಸಿದ್ದ ಜಡೇಜಾ ಇನ್ನೆರಡು ರನ್ ಸೇರಿಸುವಷ್ಟರಲ್ಲಿ ವಿಕೆಟ್ ನೀಡಿದರು.
ಉಳಿದ ಇಬ್ಬರು ಬೌಲರ್ಗಳನ್ನು ಕಟ್ಟಿಹಾಕಿ ಇನಿಂಗ್ಸ್ಗೆ ಬೇಗನೆ ಅಂತ್ಯವಾಡಬೇಕೆಂದುಕೊಂಡಿದ್ದ ಆಸೀಸ್ಗೆ ಬೌಲರ್ ಮೊಹಮದ್ ಶಮಿ ಸವಾಲಾದರು. ಅಬ್ಬರಿಸಿದ ಶಮಿ 47 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಮೇತ 37 ರನ್ ಮಾಡಿದರು. ಇನ್ನೊಂದು ತುದಿಯಲ್ಲಿ ಅಕ್ಷರ್ ಪಟೇಲ್ ಗಟ್ಟಿಯಾಗಿ ನಿಂತಿದ್ದರು.