ವಿಶಾಖಪಟ್ಟಣಂ:ವಿಶ್ವಕಪ್ ಸೋಲಿನ ಬಳಿಕ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್ಗಳ ಜಯ ಸಾಧಿಸಿದೆ.
ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸೀಸ್ ನೀಡಿದ್ದ 208 ರನ್ಗಳ ಗುರಿಯನ್ನು ಟೀಂ ಇಂಡಿಯಾ 19.5 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಮುಟ್ಟಿತು. ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಪಡೆದುಕೊಂಡಿತು.
ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ದುಕೊಂಡು, ಆಸೀಸ್ಗೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಎಡವಿದ ಟೀಮ್ ಇಂಡಿಯಾ, ಕಾಂಗರೂ ಬ್ಯಾಟರ್ಗಳಿಗೆ ಸುಲಭವಾಗಿ ರನ್ಗಳ ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ (54) ಅರ್ಧ ಶತಕ ಸಿಡಿಸಿದರೆ, ಜೋಶ್ ಇಂಗ್ಲಿಸ್(110) ಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉಳಿದಂತೆ ಶಾರ್ಟ್, ಸ್ಟೋಯಿನಿಸ್ (7 ಅಜೇಯ), ಟಿಮ್ ಡೇವಿಡ್ (19 ಅಜೇಯ) ಅಲ್ಪ ಮೊತ್ತದ ಸ್ಕೋರ್ ಕಲೆ ಹಾಕುವ ಮೂಲಕ 209 ರನ್ಗಳ ಗುರಿಯನ್ನು ನೀಡಿತು.
ಆಸೀಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಎದುರಿಸಿತು. ತಂಡದ ಸ್ಕೋರ್ 11 ಆಗಿದ್ದ ವೇಳೆ ರುತುರಾಜ್ ಗಾಯಕ್ವಾಡ್ ರನ್ ಔಟ್ ಆಗಿ ಸೊನ್ನೆಗೆ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಜೈಸ್ವಾಲ್ ತಲಾ 2 ಬೌಂಡರಿ, ಸಿಕ್ಸರ್ ಸಿಡಿಸಿ ರಂಜಿಸಿದರು. ದೊಡ್ಡ ಹೊಡೆತಕ್ಕೆ ಕೈ ಹಾಕಿ 21 ಗಳಿಸಿದ್ದಾಗ ಔಟಾದರು.
ಇಶಾನ್- ಸೂರ್ಯ ಜುಗಲ್ಬಂಧಿ:ವಿಶ್ವಕಪ್ನಲ್ಲಿ ಅವಕಾಶ ಸಿಗದೇ ಪರಿತಪಿಸಿದ್ದ ಇಶಾನ್ ಕಿಶನ್(58) ಭರ್ಜರಿ ಬ್ಯಾಟಿಂಗ್ ಮಾಡಿದರು. 2 ಬೌಂಡರಿ, 5 ಸಿಕ್ಸರ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 9 ಬೌಂಡರಿ, 4 ಸಿಕ್ಸರ್ಗಳ ನೆರವಿನಿಂದ 80 ರನ್ ಮಾಡಿದರು. ಕೊನೆಯಲ್ಲಿ ಭಾರತ ವಿಕೆಟ್ ಕಳೆದುಕೊಂಡರು ಹೊಸ ಪ್ರತಿಭೆ ರಿಂಕು ಸಿಂಗ್ 22 ರನ್ ಬಾರಿಸಿ ಗೆಲುವಿನ ದಡ ಮುಟ್ಟಿಸಿದರು.
ಇದನ್ನೂ ಓದಿ:ವಿಶ್ವಕಪ್ ಸೋಲಿನಿಂದ ಹೊರಬರಲು ಸಮಯ ಬೇಕು, ಹೊಸ ತಂಡ ಮುನ್ನಡೆಸಲು ಉತ್ಸುಕ- ಸೂರ್ಯ ಕುಮಾರ್ ಯಾದವ್