ಮುಂಬೈ:ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವ ಹಂಬಲದಲ್ಲಿರುವ ಆಸ್ಟ್ರೇಲಿಯಾ ತಂಡ ಭಾರತದೆದುರಿನ ಏಕದಿನ ಸರಣಿಯನ್ನು ಶತಾಯಗತಾಯ ಗೆಲ್ಲಲು ಯೋಜನೆ ರೂಪಿಸಿದೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯದ ಟಾಸ್ ನಡೆದಿದ್ದು, ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಗಾಯದ ಸುಳಿಯಲ್ಲಿ ಆಸಿಸ್:ನಾಯಕ ಪ್ಯಾಟ್ ಕಮಿನ್ಸ್ ತಾಯಿಯ ನಿಧನದ ಕಾರಣಕ್ಕೆ ಸರಣಿಯಿಂದ ದೂರ ಉಳಿದಿದ್ದಾರೆ. ಇತ್ತ ತಂಡದಲ್ಲಿ ಅಲೆಕ್ಸ್ ಕ್ಯಾರಿ ಅನಾರೋಗ್ಯದಿಂದ ಬಳಲುತ್ತಿದ್ದು, ತವರಿಗೆ ಮರಳಲಿದ್ದಾರೆ. ಇಂದಿನ ಪಂದ್ಯದಲ್ಲಿ ಅವರ ಜಾಗದಲ್ಲಿ ಜೋಶ್ ಇಂಗ್ಲಿಸ್ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್ ವೇಳೆ ಗಾಯಗೊಂಡು ಸ್ವದೇಶಕ್ಕೆ ಮರಳಿದ್ದ ಡೇವಿಡ್ ವಾರ್ನರ್ ಇನ್ನೂ ಸಂಪೂರ್ಣ ಫಿಟ್ ಆಗದ ಕಾರಣ ಮಿಚೆಲ್ ಮಾರ್ಷ್ ಆರಂಭಿಕನಾಗಿ ಬ್ಯಾಟ್ ಬೀಸುತ್ತಿದ್ದಾರೆ.
ನಾಲ್ವರು ವೇಗಿಗಳ ಟೀಂ ಇಂಡಿಯಾ:ಹಾರ್ದಿಕ್ ಸಂಜೆಯ ಇಬ್ಬನಿಯ ಪರಿಣಾಮ ಬ್ಯಾಟಿಂಗ್ ಅನುಕೂಲ ಬಳಸಿಕೊಳ್ಳಲು ಬೌಲಿಂಗ್ ಆಯ್ದುಕೊಂಡಿದ್ದಾಗಿ ಹೇಳಿದ್ದಾರೆ. ಪಿಚ್ ವೇಗದ ಬೌಲರ್ಗಳಿಗೆ ಸಹಕಾರಿಯಾಗಿದೆ ಎಂಬ ವರದಿ ಆಧರಿಸಿ ನಾಲ್ವರು ವೇಗಿಗಳೊಂದಿಗೆ ತಂಡ ಕಣಕ್ಕಿಳಿದಿದೆ. ಶಾರ್ದೂಲ್, ಶಮಿ, ಹಾರ್ದಿಕ್ ಮತ್ತು ಸಿರಾಜ್ ವೇಗದ ವಿಭಾಗವನ್ನು ನಿರ್ವಹಿಸಿದರೆ, ಜಡೇಜಾ ಮತ್ತು ಕುಲದೀಪ್ ಸ್ಪಿನ್ ನಿಭಾಯಿಸಲಿದ್ದಾರೆ.
ದ್ವಿಶತಕ ವೀರರಿಂದ ಆರಂಭ:ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಪ್ರಥಮ ಪಂದ್ಯ ನಡೆಯುತ್ತಿದೆ. ಆರಂಭಿಕರಾಗಿ ಗಿಲ್ ಮತ್ತು ಕಿಶನ್ ಕಣಕ್ಕಿಳಿಯಲಿದ್ದಾರೆ. ಇಬ್ಬರೂ ಈ ಹಿಂದಿನ ಸೀರೀಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಶ್ರೀಲಂಕಾ ವಿರುದ್ಧ ಕಿಶನ್ ದ್ವಿಶತಕ ದಾಖಲಿಸಿದರೆ, ನ್ಯೂಜಿಲೆಂಡ್ ಸೀರೀಸ್ನಲ್ಲಿ ಗಿಲ್ 200 ರನ್ ಗಳಿಸಿದ್ದರು.