ಮೊಹಾಲಿ (ಪಂಜಾಬ್): ಏಷ್ಯಾಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡ ಉತ್ಸಾಹದಿಂದ ಆಸ್ಟ್ರೇಲಿಯಾ ತಂಡವನ್ನು ಇಂದಿನಿಂದ ಎದುರಿಸಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಲಿಷ್ಠ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್‌ಗೂ ಮುನ್ನ ತನ್ನ ಬೆಂಚ್ ಶಕ್ತಿ ಪರೀಕ್ಷಿಸಲು ಭಾರತ ತಂಡ ಎದುರು ನೋಡುತ್ತಿದೆ. ಇಂದಿನ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ.
ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್ 22, 24 ಮತ್ತು 27 ರಂದು ನಿಗದಿಯಾಗಿವೆ. ಮೂರು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐ.ಎಸ್.ಬಿಂದ್ರಾ ಸ್ಟೇಡಿಯಂ, ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಮತ್ತು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿವೆ.
ಕೆ.ಎಲ್.ರಾಹುಲ್ ನಾಯಕ: ಸರಣಿಯ ಮೊದಲೆರಡು ಪಂದ್ಯಗಳಿಗೆ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಹೀಗಾಗಿ ಅದ್ಭುತ ಫಾರ್ಮ್ ಕಂಡುಕೊಂಡಿರುವ ಕೆ.ಎಲ್.ರಾಹುಲ್ಗೆ ಮೊದಲ ಎರಡು ಪಂದ್ಯಗಳಿಗೆ ನಾಯಕನ ಹೊಣೆ ನೀಡಲಾಗಿದೆ. ಈ ಮೂಲಕ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ಕೊನೆಯ ಬಾರಿಗೆ ತನ್ನ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲಿದೆ. ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಸರಣಿಯ ಮಹತ್ವವೇನು?:ಈ ಸರಣಿ ಎರಡೂ ದೇಶಗಳಿಗೆ ಮಹತ್ವದ್ದಾಗಿದೆ. ಭಾರತ, ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವ ಪ್ರಬಲ ತಂಡಗಳಾಗಿವೆ. ಭಾರತದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಆಸ್ಟ್ರೇಲಿಯಾಕ್ಕೆ ಸದಾವಕಾಶ ಸಕ್ಕಂತಾಗಿದೆ. ಬಲಿಷ್ಠ ತಂಡದ ವಿರುದ್ಧ ತನ್ನ ಆಟಗಾರರನ್ನು ಪರೀಕ್ಷಿಸಲು ಭಾರತಕ್ಕೂ ಅವಕಾಶವಿದೆ. ಏಷ್ಯಾಕಪ್‌ನಲ್ಲಿ ತೋರಿದ ಪ್ರದರ್ಶನವನ್ನು ಈ ಸರಣಿಯಲ್ಲೂ ಪುನರಾವರ್ತಿಸಲು ಭಾರತ ಬಯಸುತ್ತಿದೆ. ಆದ್ದರಿಂದ, ಸರಣಿಯನ್ನು ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗಾಗಿ ಅಂತಿಮ ಪೂರ್ವಾಭ್ಯಾಸವಾಗಿ ನೋಡಲಾಗುತ್ತಿದೆ.
ದಾಖಲೆಯ 8ನೇ ಏಷ್ಯಾಕಪ್ ಪ್ರಶಸ್ತಿಯೊಂದಿಗೆ ಆಸ್ಟ್ರೇಲಿಯಾ ಸರಣಿ ಪ್ರಾರಂಭಿಸಲಿರುವ ಭಾರತ ಕ್ರಿಕೆಟ್ ತಂಡವು ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಗುರಿ ಹೊಂದಿದೆ. ಏಷ್ಯಾಕಪ್ 2023ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಕೇವಲ ಒಂದು ಪಂದ್ಯವನ್ನು ಮಾತ್ರ ಕಳೆದುಕೊಂಡಿತ್ತು. ಆಸ್ಟ್ರೇಲಿಯಾವನ್ನು ಪ್ರಸ್ತುತ ಸರಣಿಯಲ್ಲಿ ಸೋಲಿಸುವುದು ಮತ್ತು ಕ್ರಿಕೆಟ್ ವಿಶ್ವಕಪ್‌ನಲ್ಲಿ ವೇಗ ಪಡೆಯುವುದು ಭಾರತ ತಂಡದ ಉದ್ದೇಶ. ಈ ಸರಣಿ ಗೆಲ್ಲುವ ಮೂಲಕ ಭಾರತ ಏಕದಿನ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರಬಹುದು.
ಪಿಚ್ ರಿಪೋರ್ಟ್: 2023ರ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿದ್ದು, ಇಬ್ಬನಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಪ್ರತಿಕೂಲ ಸಂದರ್ಭಗಳಲ್ಲಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಭಾರತಕ್ಕೆ ಇದು ಉತ್ತಮ ಅವಕಾಶ. ಅಂತಹ ಸನ್ನಿವೇಶದಲ್ಲಿ ಬ್ಯಾಟಿಂಗ್ ಹೆಚ್ಚು ಸುಲಭವಾಗುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಬೌಲಿಂಗ್, ವಿಶೇಷವಾಗಿ ಸ್ಪಿನ್ ಪ್ರದರ್ಶನವನ್ನು ಪರೀಕ್ಷಿಸಲು ಭಾರತ ಉತ್ಸುಕವಾಗಿದೆ. ಐ.ಎಸ್.ಬಿಂದ್ರಾ ಕ್ರಿಕೆಟ್ ಸ್ಟೇಡಿಯಂ ಅನ್ನು ಪಿಚ್ ಅನ್ನು ಬೌಲರ್‌ಗಳಿಗೆ ಸ್ಮಶಾನವೆಂದೇ ಬಣ್ಣಿಸಲಾಗುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡರಿಂದಲೂ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ, ಇಲ್ಲಿ ಬೌಲರ್‌ಗಳು ಆಟ ನಡೆಯುವುದು ಕಷ್ಟ. ವೇಗದ ಬೌಲರ್‌ಗಳು ಸೀಮ್ ಮತ್ತು ಸ್ವಿಂಗ್ ಪಡೆಯಬಹುದು. ಇಲ್ಲಿ ಕಳೆದ ಐದು ಏಕದಿನ ಪಂದ್ಯಗಳಲ್ಲಿ ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳು ಹೆಚ್ಚು ವಿಕೆಟ್ ಪಡೆದಿರುವುದು ಗಮನಾರ್ಹ.