ಮೊಹಾಲಿ (ಪಂಜಾಬ್):ವಿಶ್ವಕಪ್ಗೆ ತಯಾರಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಡೇವಿಡ್ ವಾರ್ನರ್ ಅರ್ಧಶತಕ ಮತ್ತು ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್ ಅವರ ಸಾಧಾರಣ ಆಟದ ನೆರವಿನಿಂದ 50 ಓವರ್ಗಳಲ್ಲಿ ಆಸೀಸ್ 276 ರನ್ಗೆ ಸರ್ವಪತನ ಕಂಡಿತು.
ಉಭಯ ತಂಡಗಳು ವಿಶ್ವಕಪ್ನ ಕೊನೆಯ ತಯಾರಿಯಲ್ಲಿವೆ. ಅಲ್ಲದೇ ಎರಡೂ ತಂಡಗಳು ವಿಶ್ವಕಪ್ ತಂಡವನ್ನೇ ಮೈದಾನಕ್ಕಿಳಿಸಿದೆ. ಭಾರತದ ನಾಯಕ ಕೆ. ಎಲ್. ರಾಹುಲ್ ಟಾಸ್ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಲ್ಲದೇ, ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿಯನ್ನು ಕಾಂಗರೂ ಪಡೆಯ ವಿರುದ್ಧ ಮಾಡಿದರು. ಇದರಿಂದ ಆಸೀಸ್ನ ವಾರ್ನರ್ ಹೊರತಾಗಿ ಯಾರಿಗೂ ಅರ್ಧಶತಕದ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.
ಆರಂಭಿಕ ಮಿಚಲ್ ಮಾರ್ಷ 4 ರನ್ ಗಳಿಸಿ ಹೊರನಡೆದರೆ, ಎರಡನೇ ವಿಕೆಟ್ಗೆ ಜೊತೆಯಾದ ಅನುಭವಿಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 94 ರನ್ ಜೊತೆಯಾಟ ಮಾಡಿದರು. 53 ಬಾಲ್ನಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 52 ರನ್ ಗಳಿಸಿದ್ದ ವಾರ್ನರ್ ರವೀಂದ್ರ ಜಡೇಜಾ ಅವರಿಗೆ ವಿಕೆಟ್ ಕೊಟ್ಟರು. ವಾರ್ನರ್ ಬೆನ್ನಲ್ಲೆ 41 ರನ್ ಗಳಿಸಿದ್ದ ಸ್ಮಿತ್ ವಿಕೆಟ್ ಒಪ್ಪಿಸಿದರು. ಮಾರ್ನಸ್ ಲ್ಯಾಬುಷೇನ್ (39) ಮತ್ತು ಕ್ಯಾಮೆರಾನ್ ಗ್ರೀನ್ (31) ಅಲ್ಪ ಜೊತೆಯಾಟ ನೀಡಿದರು.