ಬೆಂಗಳೂರು:ಅಫ್ಘಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ಕ್ರಿಕೆಟ್ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲೂ ಅಫ್ಘಾನ್ ಮಣಿಸಿ ವೈಟ್‌ವಾಶ್ ಮಾಡುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ಇದೆ.
ಮೊಹಾಲಿ ಮತ್ತು ಇಂದೋರ್‌ನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. 14 ತಿಂಗಳ ನಂತರ ಟಿ20 ಮಾದರಿಗೆ ವಿರಾಟ್ ಕೊಹ್ಲಿ ಮರಳಿದ್ದು ಬಿಟ್ಟರೆ, ಬೇರಾವುದೇ ಬದಲಾವಣೆ ತಂಡದಲ್ಲಾಗಿಲ್ಲ. ಹೀಗಾಗಿ ಭಾರತ ಟಿ20 ವಿಶ್ವಕಪ್ಗೂ ಮೊದಲು ಬೆಂಚ್ನಲ್ಲಿ ಕಾದು ಕುಳಿತಿರುವ ಆಟಗಾರರನ್ನು ಪರೀಕ್ಷಿಸುವ ಅವಶ್ಯಕತೆ ಇದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಹೊಸ ಆಟಗಾರರಿಗೆ ಅವಕಾಶ ನೀಡುವ ಲೆಕ್ಕಚಾರದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಇದ್ದಾರೆ.
ವಿಕೆಟ್‌ಕೀಪರ್/ಬ್ಯಾಟರ್ ಆಗಿರುವ ಸಂಜು ಸ್ಯಾಮ್ಸನ್ ಹಲವು ಪ್ರಮುಖ ಟೂರ್ನಿಗಳಿಂದ ದೂರ ಉಳಿದಿದ್ದಾರೆ. ಕೆಲವು ಬಾರಿ ತಂಡಕ್ಕೆ ಆಯ್ಕೆಯಾದರೂ ಆಟವಾಡಲು ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹರಿಣಗಳ ವಿರುದ್ಧ ಏಕದಿನ ಸರಣಿಯಲ್ಲಿ ಚೊಚ್ಚಲ ಶತಕ ಸಿಡಿಸಿ ತನ್ನ ಸಾಮರ್ಥ್ಯವೇನು ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ನಾಳೆಯ ಪಂದ್ಯಕ್ಕೆ ತಂಡದಲ್ಲಿ ಆಡಲು ಅವಕಾಶ ನೀಡಬಹುದು. ಆದರೆ ತಂಡದ ಮ್ಯಾನೇಜ್‌ಮೆಂಟ್ ಜಿತೇಶ್ ಶರ್ಮಾ ಅವರೊಂದಿಗೆ ಮುಂದುವರಿದರೆ, ಸಂಜು ಮತ್ತೆ ಬೆಂಚ್ ಕಾಯಬೇಕಿರುತ್ತದೆ.
ಹೊಸ ದಾಖಲೆ ಬರೆಯುವರಾ ಕೊಹ್ಲಿ, ರೋಹಿತ್?: ಚಿನ್ನಸ್ವಾಮಿ ಮೈದಾನದಲ್ಲಿ ಹೊಸ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಾಯುತ್ತಿದ್ದಾರೆ. ಟಿ20 ಮಾದರಿಯಲ್ಲಿ 12,000 ರನ್ ಗಳಿಸಲು ಕೊಹ್ಲಿಗೆ ಕೇವಲ ಆರು ರನ್‌ಗಳ ಅವಕಶ್ಯಕತೆ ಇದೆ. ಈ ಪಂದ್ಯದಲ್ಲಿ ಕೊಹ್ಲಿ ಇಷ್ಟು ರನ್ ಕಲೆಹಾಕಿದರೆ, ಟಿ20ಯಲ್ಲಿ 12 ಸಾವಿರ ರನ್ ಪೇರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು.
ಇನ್ನೊಂದೆಡೆ, ರೋಹಿತ್ ಶರ್ಮಾ ಇಂದೋರ್‌ನಲ್ಲಿ ಎರಡು ದಾಖಲೆಗಳನ್ನು ಸಾಧಿಸಿದ್ದರು. 2007ರಲ್ಲಿ ಟಿ20 ವಿಶ್ವಕಪ್ಗೆ ಗೆದ್ದು ತಂಡಕ್ಕೆ ಹಿಂತಿರುಗಿದ ನಂತರ 150 ಚುಟುಕು ಕ್ರಿಕೆಟ್ ಪಂದ್ಯವಾಡಿದ ಮೊದಲ ಅಂತಾರಾಷ್ಟ್ರೀಯ ಆಟಗಾರರಾದರು. ಅಲ್ಲದೆ ಭಾರತ ಪರ ನಾಯಕನಾಗಿ ಅತಿ ಹೆಚ್ಚು ಗೆಲುವು ಕಂಡ ರೇಸ್ನಲ್ಲಿಯೂ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿಯೊಂದಿಗೆ ಸಮವಾಗಿದ್ದು, ಅತ್ಯಂತ ಯಶಸ್ವಿ ಭಾರತೀಯ ಟಿ20 ನಾಯಕನಾಗಲು ಕೇವಲ ಒಂದು ಗೆಲುವು ಬೇಕಿದೆ. ಆದರೆ ಸತತ ಎರಡು ಬಾರಿ ಗೋಲ್ಡನ್ ಡಕ್ ಔಟ್ ಆಗಿರುವ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಯಷ್ಟರಲ್ಲಿ ರೋಹಿತ್ ಫಾರ್ಮಾಗೆ ಮರಳುವುದು ಮುಖ್ಯವಾಗಿದೆ.
ಎಂದಿನಂತೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ನೇತೃತ್ವದಲ್ಲಿ ವೇಗದ ಬೌಲಿಂಗ್ ದಾಳಿ ಮುಂದುವರಿಯಲಿದೆ. ಇವರೊಂದಿಗೆ ಮುಖೇಶ್ ಕುಮಾರ್ ಕೂಡ ಅದ್ಭುತ ಪ್ರದರ್ಶನ ತೋರಿದ್ದಾರೆ. ಪ್ರಸ್ತುತ ಸರಣಿಯ ಮತ್ತೊಂದು ಪ್ರಮುಖ ಅಂಶವೆಂದರೆ ಆಲ್‌ರೌಂಡರ್ ಶಿವಂ ದುಬೆ ಅಮೋಘ ಪ್ರದರ್ಶನ ಅಫ್ಘಾನ್ ವಿರುದ್ಧ ಎರಡು ಪಂದ್ಯಗಳನ್ನು ಭಾರತ ಗೆಲ್ಲಲು ಸಹಾಯವಾಗಿದೆ.
ತಂಡಗಳು:ಭಾರತ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೀ), ಸಂಜು ಸ್ಯಾಮ್ಸನ್ (ವಿಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್
ಅಫ್ಘಾನಿಸ್ತಾನ: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೀ), ಇಕ್ರಮ್ ಅಲಿಖಿಲ್ (ವಿಕೀ), ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮಾವುಲ್ಲಾ ಝದ್ರಾನ್, ಫ್ಹಮ್ಮದ್ ನಬಿ, ಕರೀಂ ಜನತ್, ಅಜ್ಮಾವುಲ್ಲಾ ಒಮರ್ಝಾಯ್, ಫಕ್ಉದ್ದೀನ್, ಫಕ್ಉದ್ದೀನ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಂ, ಖೈಸ್ ಅಹ್ಮದ್, ಗುಲ್ಬದಿನ್ ನೈಬ್ ಮತ್ತು ರಶೀದ್ ಖಾನ್
ಇದನ್ನೂ ಓದಿ:ಮೈದಾನದೊಳಗೆ ಹಾರಿ ಬಂದು ವಿರಾಟ್ ಕೊಹ್ಲಿ ಪಾದ ಮುಟ್ಟಿ ಅಪ್ಪಿಕೊಂಡ ಅಭಿಮಾನಿ