ಇಂದೋರ್:ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (68, 34 ಬಾಲ್) ಹಾಗೂ ಆಲ್ರೌಂಡರ್ ಶಿವಂ ದುಬೆ (ಅಜೇಯ 63, 32 ಎಸೆತ) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎರಡನೇ ಟಿ20 ಪಂದ್ಯವನ್ನೂ 6 ವಿಕೆಟ್ಗಳಿಂದ ಗೆದ್ದ ಭಾರತ ತಂಡ ಅಫ್ಘಾನಿಸ್ತಾನದ ವಿರುದ್ಧ 2-0ದಿಂದ ಸರಣಿ ಜಯಿಸಿದೆ. ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘನ್ನರು 20 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದ್ದರು.
173 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಕ್ರೀಸ್ಗಿಳಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. 16 ಬಾಲ್ಗಳಲ್ಲಿ 29 ರನ್ ಬಾರಿಸಿ ವಿರಾಟ್ ಔಟಾದರು. ಇನ್ನೊಂದು ತುದಿಯಲ್ಲಿ ಅಮೋಘ ಆಟ ತೋರಿದ ಜೈಸ್ವಾಲ್, ವಿರಾಟ್ ಜೊತೆಗೂಡಿ 57 ರನ್ ಸೇರಿಸಿದರು. ಆಗ ತಂಡದ ಮೊತ್ತ 5.3 ಓವರ್ಗಳಲ್ಲಿ 62 ರನ್ ಆಗಿತ್ತು.
ಕೊಹ್ಲಿ ವಿಕೆಟ್ ಪತನದ ಬಳಿಕ ಯಶಸ್ವಿ ಜೊತೆಗೂಡಿದ ಶಿವಂ ದುಬೆ ಅಫ್ಘನ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. ಈ ಜೋಡಿ, ಮೂರನೇ ವಿಕೆಟ್ಗೆ 92 ರನ್ ಸೇರಿಸಿತಲ್ಲದೆ, ತಂಡವನ್ನು ಸುಲಭ ಜಯದತ್ತ ಕೊಂಡೊಯ್ದಿತು. ಮೊಹಮದ್ ನಬಿ ಓವರ್ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ ದುಬೆ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಜೈಸ್ವಾಲ್ ಔಟಾದ ಬಳಿಕ ಬಂದ ಜಿತೇಶ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ತದನಂತರ ರಿಂಕು ಸಿಂಗ್ ಅಜೇಯ 9 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 15.4 ಓವರ್ಗಳಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ ತಂಡ ಗೆಲುವಿನ ಕೇಕೆ ಹಾಕಿತಲ್ಲದೆ, ಸರಣಿ ಜಯಿಸಿದೆ.