ಮುಂಬೈ:ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿ ಬೆನ್ನಲ್ಲೇ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ಆಡಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ವೇಳಾಪಟ್ಟಿ ಪ್ರಕಟಗೊಳಿಸಿದೆ. ಅಮೆರಿಕದಲ್ಲಿ ಕ್ರಿಕೆಟ್ ಪರಿಚಯಿಸುವ ಉದ್ದೇಶದಿಂದ ಎರಡು ಟಿ-20 ಪಂದ್ಯಗಳು ಯುಎಎಸ್ನಲ್ಲಿ ಆಯೋಜನೆಗೊಂಡಿವೆ.
ವೆಸ್ಟ್ ಇಂಡೀಸ್ ವಿರುದ್ಧ ಐದು ಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ಜುಲೈ 22ರಿಂದ ಪಂದ್ಯಗಳು ಆಯೋಜನೆಗೊಳ್ಳಲಿವೆ. ಇಂಗ್ಲೆಂಡ್ ವಿರುದ್ಧದ ಫೈನಲ್ ಟೆಸ್ಟ್ ಪಂದ್ಯ ಮುಗಿಯುತ್ತಿದ್ದಂತೆ ಭಾರತ ನೇರವಾಗಿ ಕೆರಿಬಿಯನ್ ನಾಡಿಗೆ ಪ್ರವಾಸ ಕೈಗೊಳ್ಳಲಿದೆ.
ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನ ಟ್ರಿನಿಡಾಡ್, ಟೊಬಾಗೊ ಮತ್ತು ಸೇಂಟ್ ಕಿಟ್ಸ್ ನೆವಿಸ್ನಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ಎರಡು ಟಿ-20 ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿವೆ. ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22,24 ಮತ್ತು 27ರಂದು ನಡೆಯಲಿದ್ದು, ಇದಾದ ಬಳಿಕ ಟಿ- 20 ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ.