ಹೈದರಾಬಾದ್: ದಕ್ಷಿಣ ಆಫ್ರಿಕಾ ಪ್ರವಾಸ ಟಿ20 ಸರಣಿ ಸಮಬಲವಾಗಿದ್ದು, ಭಾನುವಾರದಿಂದ ಆರಂಭವಾಗಲಿರುವ ಏಕದಿನ ಮತ್ತು ತಿಂಗಳಾಂತ್ಯದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳ ಪ್ರಕಟಿತ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಏಕದಿನ ಸರಣಿಯಿಂದ ವೈಯಕ್ತಿಕ ಕಾರಣಕ್ಕೆ ದೀಪಕ್ ಚಹಾರ್ ತಂಡದ ಭಾಗವಾಗುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದ್ದಾಗಲೇ ಶಮಿ ಸಂಪೂರ್ಣ ಚೇತರಿಸಿಕೊಂಡರೆ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಅಲ್ಲಿಯ ವರೆಗೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ಸಂಪೂರ್ಣ ಫಿಟ್ ಆಗಿರದ ಶಮಿ ಎರಡೂ ಟೆಸ್ಟ್ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ಕೌಟುಂಬಿಕ ವೈದ್ಯಕೀಯ ತುರ್ತುನಿಂದಾಗಿ ಹರಿಣಗಳ ವಿರುದ್ಧದ ಏಕದಿನ ಸರಣಿಗೆ ತಾವು ಲಭ್ಯರಾಗಿರುವುದಿಲ್ಲ ಎಂದು ದೀಪಕ್ ಚಹಾರ್ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಆಕಾಶ್ ದೀಪ್ ಅವರನ್ನು ಚಹಾರ್ ಸ್ಥಾನಕ್ಕೆ ಹೆಸರಿಸಿದೆ.
ಶ್ರೇಯಸ್ ಅಯ್ಯರ್ ಅವರನ್ನು ಎರಡು ಏಕದಿನ ಪಂದ್ಯಗಳಿಂದ ಹೊರಗಿಡಲಾಗಿದೆ. ಟೆಸ್ಟ್ ತಂಡದ ಭಾಗವಾಗಿ ಅಭ್ಯಾಸ ನಡೆಸಬೇಕಾದ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್ ಅವರು ಮೊದಲ ಏಕದಿನ ತಂಡದ ಭಾಗವಾಗಿ ಮಾತ್ರ ಆಡಲಿದ್ದಾರೆ. ನಂತರ ಟೆಸ್ಟ್ ತಂಡದ ಜೊತೆ ಸೇರಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೋಚ್ ಸಿಬ್ಬಂದಿ ಬದಲಾವಣೆ:ಟೆಸ್ಟ್ ಸರಣಿಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಏಕದಿನ ಪಂದ್ಯಗಳು ನಡೆಯುವಾಗ ಟೆಸ್ಟ್ ತಂಡದ ಅಭ್ಯಾಸಕ್ಕೆ ರಾಹುಲ್ ದ್ರಾವಿಡ್ ಅವರ ಟೀಮ್ ಕೋಚಿಂಗ್ಗೆ ನೇಮಿಸಿದೆ. ಏಕದಿನ ತಂಡಕ್ಕೆ ಭಾರತ ಎ ತಂಡದ ಕೋಚಿಂಗ್ ಸ್ಟಾಫ್ ಸಹಾಯ ಮಾಡಲಿದ್ದಾರೆ.