ಸಿಡ್ನಿ: ಹನುಮ ವಿಹಾರಿ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಗಾಯದಿಂದಾಗಿ, ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಶಕ್ತಿ ದುರ್ಬಲಗೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾ ಮ್ಯಾನೇಜಮೆಂಟ್ ವೃದ್ಧಿಮಾನ್ ಸಹಾ ಅವರನ್ನು ವಿಕೆಟ್ ಕೀಪರ್ ಆಗಿ ಮತ್ತು ರಿಷಭ್ ಪಂತ್ ಅವರನ್ನು ವಿಶೇಷ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ.
ವಿಹಾರಿ, ಜಡೇಜಾ ಮತ್ತು ಅಶ್ವಿನ್ ಅವರಿಗಿಂತ ಮೊದಲು ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಕೆ.ಎಲ್. ರಾಹುಲ್ ಗಾಯದ ಕಾರಣ ತವರಿಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ ಕೂಡ ತಮ್ಮ ಮೊದಲ ಮಗುವಿನ ಜನನದ ಕಾರಣ ವಾಪಸ್ ಆಗಿದ್ದಾರೆ.
ಈ ಎಲ್ಲಾ ಆಟಗಾರರ ಅನುಪಸ್ಥಿತಿಯಲ್ಲಿ, ಭಾರತ ತಂಡದ ಬಲ ಉತ್ತಮವಾಗಿಲ್ಲ. ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಚೇತೇಶ್ವರ ಪೂಜಾರ ಮೂರನೇ ಸ್ಥಾನದಲ್ಲಿದ್ದರೆ, ನಾಯಕ ಅಜಿಂಕ್ಯ ರಹಾನೆ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ.
ಆದರೆ ಐದನೇ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು ಕನ್ಫರ್ಮ್ ಇಲ್ಲ. ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹನುಮ ವಿಹಾರಿ ಅವರನ್ನು ಮೂರನೇ ಟೆಸ್ಟ್‌ನ ಕೊನೆಯ ದಿನದಂದು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಪಂತ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಇಳಿದಿದ್ದರು ಪಂತ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ವಿಧಾನದಿಂದಾಗಿ ಅದೇ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಇದೆ, ಸಹಾ ಆರನೇ ಸ್ಥಾನದಲ್ಲಿ ಆಡಬಹುದು.
ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 97 ರನ್ ಗಳಿಸಿದ ಪಂತ್ ಅವರು ಬ್ಯಾಟ್ಸ್‌ಮನ್ ಆಗಿ ಮತ್ತು ವೃದ್ಧಿಮಾನ್ ಸಹಾ ವಿಕೆಟ್‌ಕೀಪರ್ ಆಗಿ ಭಾರತದ ಪರ ಆಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಭಾರತ ಇನ್ನೊಬ್ಬ ಬ್ಯಾಟ್ಸ್‌ಮನ್‌ನನ್ನು ಆಡಿಸಿದರೆ, ಅವರು ಐದನೇ ಸ್ಥಾನದಲ್ಲಿ ಉತ್ತಮವಾಗಿ ಆಡಬಹುದು. ಇದರೊಂದಿಗೆ ಪಂತ್ ಆರನೇ ಸ್ಥಾನದಲ್ಲಿ ಮತ್ತು ಸಹಾ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ಪಾಂಟಿಂಗ್ ಸೋಮವಾರ ಹೇಳಿದ್ದರು.