ಕ್ಯಾನ್ಬೆರಾ :ಯಜುವೇಂದ್ರ ಚಹಲ್ ಮ್ಯಾಜಿಕ್ ಮತ್ತು ಚೊಚ್ಚಲ ಪದಾರ್ಪಣೆ ಪಂದ್ಯದಲ್ಲಿ ಟಿ. ನಟರಾಜನ್ ಅಬ್ಬರದ ಬೌಲಿಂಗ್ಗೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಶರಣಾಯಿತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 0-1 ಮುನ್ನಡೆ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ ಆಸ್ಟ್ರೇಲಿಯಾಕ್ಕೆ 161 ರನ್ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 150 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಮೂಲಕ 11ರನ್ಗಳ ಸೋಲನುಭವಿಸಿತು. ನಾಯಕ ಆರೋನ್ ಫಿಂಚ್ (35), ಡಿ ಆರ್ಕಿ ಶಾರ್ಟ್ (34) ಮತ್ತು ಮೋಯಿಸ್ ಹೆನ್ರಿಕ್ಸ್ (30) ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದ್ರೆ, ಉಳಿದವರು ಅಲ್ಪಮೊತ್ತಕ್ಕೆ ಕುಸಿದರು.
ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಆಸೀಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿದ ನಟರಾಜನ್ 4 ನಾಲ್ಕು ಓವರ್ಗಳಿಗೆ 30 ರನ್ ನೀಡಿ 3 ವಿಕೆಟ್ಗಳನ್ನು ಪಡೆದು ಅದ್ಭುತ ಪ್ರದರ್ಶನ ತೋರಿದರು. ಈ ಮೂಲಕ ಮುಂದಿನ ಪಂದ್ಯಕ್ಕೆ ಸ್ಥಾನ ಭದ್ರಪಡಿಸಿಕೊಂಡರು. ಹಾಗೆಯೇ ಚಹಲ್ ಕೂಡ 25ರನ್ ನೀಡಿ 3 ವಿಕೆಟ್ ಪಡೆದು ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ದೀಪಕ್ ಚಹಲ್ 1ವಿಕೆಟ್ ಕಬಳಿಸಿದರು.
ಭಾರತದ ಪರ ಆರಂಭಿಕರಾಗಿ ಮೈದಾನಕ್ಕಿಳಿದ ಕೆ.ಎಲ್. ರಾಹುಲ್ ಅರ್ಧಶತಕ ಸಿಡಿಸಿದ್ರೆ (51) ಮತ್ತು ಕೊನೆಯ ಹಂತದಲ್ಲಿ ರವೀಂದ್ರ ಜಡೇಜಾ (44) ಬಿರುಸಿನ ಬ್ಯಾಟಿಂಗ್ ನಡೆಸಿ ಮಿಂಚಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತು.
ರಾಹುಲ್ ಮತ್ತು ಜಡೇಜಾರನ್ನು ಹೊರತುಪಡಿಸಿದ್ರೆ ಉಳಿದ ನಾಯಕ ವಿರಾಟ್ ಕೊಹ್ಲಿ (9), ಶಿಖರ್ ಧವನ್ (1), ಮನಿಷ್ ಪಾಂಡೆ (2), ಸಂಜು ಸ್ಯಾಮ್ಸನ್ (23), ಹಾರ್ದಿಕ್ ಪಾಂಡ್ಯ (16) ನೀರಸ ಪ್ರದರ್ಶನ ತೋರಿದರು.
ಮಾರಕ ದಾಳಿ ನಡೆಸಿ ಆಸೀಸ್ ಬೌಲರ್ಗಳು ಟೀಂ ಇಂಡಿಯಾ ಆಟಗಾರರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಮೋಯಿಸ್ ಹೆನ್ರಿಕ್ಸ್ 3, ಮಿಚೆಲ್ ಸ್ಟಾರ್ಕ್ 2, ಜಂಪಾ ಮತ್ತು ಮಿಚೆಲ್ ಸ್ವೀಪನ್ ತಲಾ ಒಂದು ವಿಕೆಟ್ ಕಬಳಿಸಿದರು. ಮೂರು ವಿಕೆಟ್ ಕಬಳಿಸಿದ ಯಜುವೇಂದ್ರ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.