ಮೆಲ್ಬೋರ್ನ್:ಆಸ್ಟ್ರೇಲಿಯಾ ವಿರುದ್ಧದಗುಲಾಬಿ ಚೆಂಡು ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಆರಂಭಿಕ ಆಟಗಾರ ಪೃಥ್ವಿ ಶಾ ಬದಲಿಗೆ ಶುಭ್ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ.
ಇನ್ನಿಂಗ್ಸ್ ಆರಂಭಿಸುವ ಆಟಗಾರರ ಪಾತ್ರ ನಿರ್ಣಾಯಕವಾಗಿರಲಿದೆ. ಹೀಗಾಗಿ, ಮಾಯಾಂಕ್ ಅಗರ್ವಾಲ್ ಮತ್ತು ಶುಭ್ಮನ್ ಗಿಲ್ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು.
ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ದೊರೆಯದ ಕಾರಣ ಭಾರತ ತಂಡ 8 ವಿಕೆಟ್ಗಳ ಸೋಲನುಭವಿಸಿತು. ಮೊದಲ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಪೃಥ್ವಿ ಶಾ ರನ್ ಗಳಿಸಲು ಹೆಣಗಾಡಿದರು. ಅದಲ್ಲದೆ, ಅಭ್ಯಾಸ ಪಂದ್ಯದಲ್ಲೂ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದರು.
ಆದರೂ ಆಡುವ 11ರ ಬಳಗದಲ್ಲಿ ಆತ ಕಾಣಿಸಿಕೊಂಡಾಗ ತಂಡದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಮೊದಲ ಟೆಸ್ಟ್ನಲ್ಲಿ ಮಯಾಂಕ್ ಅಗರ್ವಾಲ್ ಉತ್ತಮ ಪ್ರದರ್ಶನ ತೋರದಿದ್ದರೂ ಕೊಂಚ ಸಮಯ ವಿಕೆಟ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಶಾ ವಿಫಲವಾದ ಕಾರಣ ಶುಭ್ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ.
ಆಸ್ಟ್ರೇಲಿಯಾ ಮಾತ್ರವಲ್ಲ, ಬೇರೆಡೆಯೂ ಆರಂಭಿಕ ಆಟಗಾರನ ಪಾತ್ರ ನಿರ್ಣಾಯಕ. ತಮ್ಮ ಆರಂಭಿಕ ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದ್ದೇನೆ. ನಾಳೆಯ ಪಂದ್ಯದಲ್ಲಿ ಅವರ ನೈಸರ್ಗಿಕ ಆಟ ನೋಡುವ ಭರವಸೆ ಹೊಂದಿದ್ದೇನೆ. ಹೀಗಾಗಿ, ಒತ್ತಡ ಹೇರುತ್ತಿಲ್ಲ ಎಂದರು.
ವಿರಾಟ್ ಕೊಹ್ಲಿ ಅನುಪಸ್ಥಿತಿ ನಿಜಕ್ಕೂ ತಂಡಕ್ಕೆ ಕಾಡಲಿದೆ. ಅವರ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೇನೆ. ಯಾವುದೇ ಧಕ್ಕೆ ಬಾರದಂತೆ ಪಂದ್ಯ ಗೆಲ್ಲಿಸಿಕೊಡಲು ಪ್ರಯತ್ನ ಮಾಡುತ್ತೇವೆ. ಆಟಗಾರರೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ರಹಾನೆ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಮತ್ತು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಾಳೆ (ಡಿ.26) ಬೆಳಿಗ್ಗೆ ಆರಂಭವಾಗಲಿದೆ.