ಮೆಲ್ಬೋರ್ನ್ :ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಗೆದ್ದು ಬೀಗಿದ್ದ ಕಾಂಗರೂ ಪಡೆಗೆ ಟೀಂ ಇಂಡಿಯಾ ತಿರುಗೇಟು ಕೊಟ್ಟಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸೀಸ್ ಮೇಲೆ ಸವಾರಿ ಮಾಡಿ ಭರ್ಜರಿ ಗೆಲುವು ಪಡೆದಿದೆ.
ಎರಡನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್, ಈ ಸೋಲು ನಮಗೆ ಸಾಕಷ್ಟು ನೀರಾಸೆ ಮೂಡಿಸಿದೆ. ಈ ಸೋಲಿಗೆ ನಮ್ಮ ತಂಡದ ಕಳಪೆ ಪ್ರದರ್ಶನವೇ ಕಾರಣ. ಭಾರತ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು ಉತ್ತಮ ಆಟವಾಡಿ ನಮ್ಮನ್ನು ಸೋಲಿಸಿದ್ದಾರೆ. ನಾವು ಮಾಡಿದ ಕೆಲ ತಪ್ಪುಗಳು ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.