ಸಿಡ್ನಿ: ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಆ್ಯರೋನ್ ಫಿಂಚ್ ಜೊತೆ ಇನ್ನಿಂಗ್ಸ್ ಆರಂಭಿಸಲು ಸಿದ್ದನಿದ್ದೇನೆ. ಮತ್ತು ಆ ಸ್ಥಾನವನ್ನು ಉತ್ತಮವಾಗಿ ನಿಭಾಯಿಸುವೆ ಎಂದು ಆಸೀಸ್ ಬಲಗೈ ಆಟಗಾರ ಮಾರ್ನಸ್ ಲಬುಶೇನ್ ಹೇಳಿದರು.
ನವೆಂಬರ್ 29ರಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಗಾಯಗೊಂಡ ಕಾರಣ ಅವರು ಅಂತಿಮ ಏಕದಿನ ಮತ್ತು ಮೂರು ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಸದ್ಯ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದೇನೆ. ಆಟದ ಪರಿಸ್ಥಿತಿ ಮತ್ತು ಅದಕ್ಕೆ ಅನುಗುಣವಾಗಿ ಆ ಪಾತ್ರವನ್ನು ತಂಡ ಹೇಳಿದಂತೆ ನಿರ್ವಹಿಸುತ್ತೇನೆ ಎಂದು ಹೇಳಿದರು.
ಆರಂಭಿಕನಾಗಿ ಕಣಕ್ಕಿಳಿಯಲು ಅವಕಾಶ ಒಲಿದು ಬಂದರೆ, ಅದಕ್ಕಿಂತ ಸಂತಸ ಬೇರೆನೂ ಇಲ್ಲ. ಒಂದು ವೇಳೆ ಅವಕಾಶ ಸಿಕ್ಕರೆ ನನ್ನ ಮೇಲಿಟ್ಟುರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ತಂಡ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ. ಆದರೆ, ಆರಂಭಿಕನಾಗಿ ಮೈದಾನಕ್ಕೆ ಬರಲು ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು.
ಮೊದಲ ಮತ್ತು ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಕ್ರಮವಾಗಿ 66, 51 ರನ್ಗಳಿಂದ ಗೆಲುವು ಸಾಧಿಸಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ 2ರನ್ಗೆ ಔಟಾಗಿದ್ದ ಲಬುಶೇನ್, ಎರಡನೇ ಪಂದ್ಯದಲ್ಲಿ 61 ಬಾಲ್ಗಳಿಗೆ 70 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದರು. ವಾರ್ನರ್ ಬದಲಿಗೆ ಡಿ ಆರ್ಕಿ ಶಾರ್ಟ್ ತಂಡ ಸೇರಿಕೊಳ್ಳಲಿದ್ದಾರೆ. ಕೊನೆಯ ಏಕದಿನ ಪಂದ್ಯ ಡಿಸೆಂಬರ್ 2ರಂದು ಕ್ಯಾನ್ಬೆರಾದಲ್ಲಿ ನಡೆಯಲಿದೆ.