ಹೈದರಾಬಾದ್ :ವಿರಾಟ್ ಕೊಹ್ಲಿ ನೇತೃತ್ವದ ಭಾರತ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಕ್ಕಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಭಿನಂದಿಸಿದ್ದಾರೆ.
ಎರಡನೇ ಟಿ-20 ಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಿದ್ದರಿಂದ ರೋಹಿತ್ ಟೀಂ ಇಂಡಿಯಾಗೆ ಅಭಿನಂದಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಮಂಡಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ರೋಹಿತ್ ಭಾರತದ ವೈಟ್-ಬಾಲ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. 'ಟೀಂ ಇಂಡಿಯಾ ಆಡಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಭಾರತ ತಂಡ ಸರಣಿ ಗೆದ್ದಿರುವುದು ಖುಷಿ ತಂದಿದೆ' ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಪಂದ್ಯದ ಮುಕ್ತಾಯದ ನಂತರ, 'ಇದೊಂದು ಅದ್ಭುತ ಸಾಧನೆ. ನಾವು ಒಂದು ಟಿ20 ಸ್ಪೆಷಲಿಸ್ಟ್ ತಂಡದಂತೆ ಆಡಿದ್ದೇವೆ. ವಾಸ್ತವವೆಂದರೆ, ನಾವು ರೋಹಿತ್ ಹಾಗೂ ಬುಮ್ರಾ ಅವರಂತಹ ನುರಿತ ವೈಟ್ಬಾಲ್ ಆಟಗಾರರಿಲ್ಲದೆ ಸರಣಿ ಗೆದ್ದಿದ್ದೇವೆ. ಇದು ನನಗೆ ಹೆಚ್ಚು ಖುಷಿ ನೀಡಿದೆ. ಈ ತಂಡವನ್ನು ಹೊಂದಿರುವುದಕ್ಕೆ ಹೆಮ್ಮೆಯಿದೆ' ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.