ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಮುಂಬರುವ ಟಿ 20 ವಿಶ್ವಕಪ್ ನಲ್ಲಿ ಭಾಗವಹಿಸುವ 16 ತಂಡಗಳ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತವು ಕ್ರಮವಾಗಿ ಅ.17 ಮತ್ತು ಅ.19 ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಬ್ರಿಸ್ಬೇನ್‌ನ ಗಬ್ಬಾದಲ್ಲಿ ತನ್ನ ಎರಡೂ ಅಭ್ಯಾಸ ಪಂದ್ಯಗಳನ್ನು ಆಡಲಿದೆ ಎಂದು ತಿಳಿಸಿದೆ.
ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ :ಅ.10 ರಿಂದ 13ರ ವರೆಗೆ ನಡೆಯುವ ಮೊದಲ ಸುತ್ತಿನ ಅಭ್ಯಾಸ ಪಂದ್ಯಗಳು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಬಳಿಕ ನಡೆಯುವ ಸೂಪರ್ 12 ತಂಡಗಳ ಪಂದ್ಯಾವಳಿಯು ಬ್ರಿಸ್ಬೇನ್‌ನ ಗಬ್ಬಾ ಮತ್ತು ಅಲನ್ ಬಾರ್ಡರ್ ಫೀಲ್ಡ್ ನಲ್ಲಿ ಅಕ್ಟೋಬರ್ 17ರಿಂದ 19 ರವರೆಗೆ ನಡೆಯಲಿದೆ. ಮೊದಲ ಅಭ್ಯಾಸ ಪಂದ್ಯವು ಎರಡು ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಅ. 10 ರಂದು ಜಂಕ್ಷನ್ ಓವಲ್‌ನಲ್ಲಿ ನಡೆಯಲಿದೆ. ಅ.18 ರಂದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಗಬ್ಬಾದಲ್ಲಿ ಸೆಣಸಾಡಲಿವೆ.