ಕೊಲಂಬೊ: ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಒಂದೇ ರಾಷ್ಟ್ರದ ವಿರುದ್ಧ ಅತಿ ಹೆಚ್ಚು ಗೆಲುವು ಪಡೆದ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ.
ಶ್ರೀಲಂಕಾ ನೀಡಿದ 276 ರನ್ಗಳ ಗುರಿಯನ್ನು ದೀಪಕ್ ಚಹಾರ್(69) ಸಹಾಸದಿಂದ ಭಾರತ ಇನ್ನು 5 ಎಸೆತಗಳಿರುವಂತೆ ಗೆದ್ದು ಬೀಗಿತ್ತು. ಇದು ಭಾರತ ತಂಡ ಶ್ರೀಲಂಕಾ ವಿರುದ್ಧ ಪಡೆದ 93ನೇ ಏಕದಿನ ಪಂದ್ಯದ ಗೆಲುವಾಗಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ಜಯ ಪಡೆದ ವಿಶ್ವದಾಖಲೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.
ಈ ಹಿಂದೆ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧವೇ 92 ಪಂದ್ಯಗಳಲ್ಲಿ ಗೆಲುವು ಸಾಧಿಸಿ ವಿಶ್ವದಾಖಲೆ ಬರೆದಿತ್ತು. ಇದೀಗ ಪಾಕಿಸ್ತಾನ 2ನೇ ಸ್ಥಾನಕ್ಕೆ ಕುಸಿದಿದೆ. 5 ಬಾರಿಯ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕೂಡ ನ್ಯೂಜಿಲೆಂಡ್ ವಿರುದ್ಧ 92 ಪಂದ್ಯಗಳನ್ನು ಗೆದ್ದು 2ನೇ ಸ್ಥಾನದಲ್ಲಿದೆ. ಅಲ್ಲದೆ ಆಸೀಸ್ ಇಂಗ್ಲೆಂಡ್ ವಿರುದ್ಧ 84 , ಭಾರತದ ವಿರುದ್ಧ 80 ಮತ್ತು ವಿಂಡೀಸ್ ವಿರುದ್ಧ 74 ಗೆಲುವು ಪಡೆದ ದಾಖಲೆಯನ್ನು ಹೊಂದಿದೆ.