2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವ ಮೊದಲು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಭಾರತ ಎರಡು ಪ್ರತ್ಯೇಕ ತಂಡಗಳನ್ನು ಹೆಸರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಭಾರತ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 2022 ರ ಜನವರಿಯಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಅಶ್ವಿನ್ ಆಡಿದ್ದರು.
ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ವೆಸ್ಟ್ ಇಂಡೀಸ್ ಸರಣಿ ಮತ್ತು ಏಷ್ಯಾಕಪ್ ಆಡಿರುವ ಅನುಭವಿ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ ಅವರಿಗೆ ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ರಾಂತಿ ಕೊಡಲಾಗಿದೆ. ಆದರೆ ಕೊನೆಯ ಏಕದಿನ ಪಂದ್ಯದ ವೇಳೆಗೆ ಈ ಇಬ್ಬರು ಆಟಗಾರರು ತಂಡಕ್ಕೆ ಮರಳಲಿದ್ದಾರೆ.
ಮೊದಲೆರಡು ಪಂದ್ಯಕ್ಕೆ ರಾಹುಲ್ ಸಾರಥ್ಯ: ಆಸಿಸ್ ವಿರುದ್ಧದ ಮೊದಲೆರಡು ಪಂದ್ಯಕ್ಕೆ ಕೆಎಲ್ ರಾಹುಲ್ ಅವರಿಗೆ ನಾಯಕತ್ವ ನೀಡಲಾಗಿದೆ. ಐಪಿಎಲ್ ವೇಳೆ ಕೊನೆಯಲ್ಲಿ ಗಾಯಕ್ಕೆ ತುತ್ತಾಗಿದ್ದ ರಾಹುಲ್ ಏಷ್ಯಾಕಪ್ನಲ್ಲಿ ಕಮ್ಬ್ಯಾಕ್ ಮಾಡಿದ್ದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕದ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.
ತಂಡಕ್ಕೆ ಮರಳಿದ ಆರ್ ಅಶ್ವಿನ್: ಟೆಸ್ಟ್ನ ನಂ.1 ಬೌಲರ್ ರವಿಚಂದ್ರನ್ ಅಶ್ವಿನ್ಗೆ ತಂಡದಲ್ಲಿ ಬಹಳ ಸಮಯದಿಂದ ಸ್ಥಾನವೇ ಸಿಕ್ಕಿರಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅವರನ್ನು ಆಡಿಸಿರಲಿಲ್ಲ. 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಶ್ವಿನ್ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈಗ ಆಸಿಸ್ ಸರಣಿಗೆ 3ನೇ ಬೌಲರ್ ಆಗಿ ಸೇರ್ಪಡೆಗೊಂಡಿದ್ದಾರೆ. ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಂಡದ ಪ್ರಮುಖ ಬೌಲರ್ಗಳಾಗಿದ್ದಾರೆ. ವಿಶ್ವಕಪ್ ತಂಡದಲ್ಲಿ ಆರ್ ಅಶ್ವಿನ್ ಅವರನ್ನು ಸೇರಿಸಿಕೊಂಡಿಲ್ಲ.