ಸೆಂಚುರಿಯನ್: ಭಾರತ ನೀಡಿರುವ 305 ರನ್ಗಳ ಕಠಿಣ ಗುರಿ ಬೆನ್ನಟ್ಟಿರುವ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 4ನೇ ದಿನ 94 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಕೊನೆಯ ದಿನ ಎರಡೂ ತಂಡಕ್ಕೂ ನಿರ್ಣಾಯಕವಾಗಿದ್ದು, ಭಾರತಕ್ಕೆ ಗೆಲ್ಲಲು 6 ವಿಕೆಟ್ ಅಗತ್ಯವಿದ್ದರೆ, ದಕ್ಷಿಣ ಆಫ್ರಿಕಾಗೆ 211 ರನ್ಗಳ ಅಗತ್ಯವಿದೆ.
4ನೇ ದಿನ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 174 ರನ್ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ 34 ರನ್ಗಳಿಸಿದರೆ, ರಹಾನೆ 20, ಕೊಹ್ಲಿ 18, ರಾಹುಲ್ 23, ಪೂಜಾರ 16, ಅಶ್ವಿನ್ 14 ರನ್ಗಳಿಸಿದ್ದರು. ಆದರೆ, 130 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಹಿತ 305 ರನ್ಗಳ ಕಠಿಣ ಗುರಿ ನೀಡಿತ್ತು.
ಕಗಿಸೊ ರಬಾಡ 42ಕ್ಕೆ 4, ಮಾರ್ಕೊ ಜಾನ್ಸನ್ 55ಕ್ಕೆ 4, ಲುಂಗಿ ಎಂಗುಡಿ 31ಕ್ಕೆ 2 ವಿಕೆಟ್ ಪಡೆದಿದ್ದರು. 305 ರನ್ಗಳ ಗುರಿ ಬೆನ್ನಟ್ಟಿದ ಅತಿಥೇಯ ತಂಡಕ್ಕೆ ವೇಗಿ ಮೊಹಮ್ಮದ್ ಶಮಿ 2ನೇ ಓವರ್ನಲ್ಲೇ ಐಡೆನ್ ಮಾರ್ಕ್ರಮ್(1) ವಿಕೆಟ್ ಪಡೆದು ಆಘಾತ ನೀಡಿದರು. ಯುವ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಸ್ಪೆಲ್ನಲ್ಲಿ 36 ಎಸೆತಗಳಲ್ಲಿ 17 ರನ್ಗಳಿಸಿದ್ದ ಕೀಗನ್ ಪೀಟರ್ಸನ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು.