ಅಹಮದಾಬಾದ್, ಗುಜರಾತ್ : ಟೀಂ ಇಂಡಿಯಾ ಇಂದು ಐತಿಹಾಸಿಕ ಪಂದ್ಯವನ್ನು ಆಡಲಿದೆ. 1000ನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಮೂಲಕ ಸಾವಿರ ಪಂದ್ಯಗಳ ಮೈಲಿಗಲ್ಲನ್ನು ಮುಟ್ಟಿರುವ ವಿಶ್ವದ ಮೊದಲ ತಂಡ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಈ ಪಂದ್ಯವನ್ನು ಆಡಲಿದ್ದು, ಗುಜರಾತ್ನ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ತವರು ನೆಲದಲ್ಲಿಯೇ 1000ನೇ ಪಂದ್ಯವನ್ನು ಟೀಂ ಇಂಡಿಯಾ ಆಡುತ್ತಿರುವುದು ವಿಶೇಷ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಒಟ್ಟು ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಟೀಂ ಇಂಡಿಯಾ ಇದುವರೆಗೆ 999 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 518 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 431 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, 9 ಪಂದ್ಯಗಳು ಟೈನಲ್ಲಿ ಕೊನೆಗೊಂಡಿವೆ. 41 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಇದನ್ನೂ ಓದಿ:U-19 ವಿಶ್ವಕಪ್: 5ನೇ ಬಾರಿ ಚಾಂಪಿಯನ್ ಪಟ್ಟ ಗೆದ್ದ ಭಾರತ
ಐತಿಹಾಸಿಕ ಮೈಲುಗಲ್ಲು ಸೃಷ್ಟಿ ಮಾಡಲು ಸಜ್ಜುಗೊಂಡಿರುವ ಟೀಂ ಇಂಡಿಯಾಗೆ ಈಗಾಗಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಭಾಶಯ ಕೋರಿದ್ದು, 1000ನೇ ಏಕದಿನ ಪಂದ್ಯ ಆಡುತ್ತಿರುವುದು ಒಂದು ದೊಡ್ಡ ಮೈಲಿಗಲ್ಲು. ಭಾರತದ ಪರ ಕ್ರಿಕೆಟ್ ಆಡಿರುವ ಆಟಗಾರರು, ಮಂಡಳಿ ಸದಸ್ಯರಿಂದ ಮಾತ್ರ ಇಂತಹ ಸಾಧನೆ ಸಾಧ್ಯವಾಗಿದೆ ಎಂದಿದ್ದರು.