ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ):ಹರಿಣಗಳ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 266 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 240 ರನ್ಗಳ ಟಾರ್ಗೆಟ್ ನೀಡಿದೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಚೇತೇಶ್ವರ್ ಪೂಜಾರಾ(53), ಅಂಜಿಕ್ಯ ರಹಾನೆ(58) ಹಾಗೂ ಹನುಮ ವಿಹಾರಿ (40*)ರನ್ಗಳ ನೆರವಿನಿಂದ 10ವಿಕೆಟ್ ನಷ್ಟಕ್ಕೆ 266 ರನ್ ಗಳಿಗೆ ಆಲೌಟ್ ಆಗಿದ್ದು, ಈ ಮೂಲಕ ಎದುರಾಳಿ ತಂಡಕ್ಕೆ 240 ರನ್ಗಳ ಗುರಿ ನೀಡಿದೆ.
ನಿನ್ನೆ 85 ರನ್ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಬ್ಯಾಟಿಂಗ್ ಮುಂದುವರೆಸಿತು. 35 ರನ್ಗಳಿಕೆ ಮಾಡಿದ್ದ ಪೂಜಾರಾ ಹಾಗೂ 11 ರನ್ ಗಳಿಕೆ ಮಾಡಿದ್ದ ರಹಾನೆ ಇಂದು ಬ್ಯಾಟಿಂಗ್ ಮುಂದುವರೆಸಿದರು. ಈ ಜೋಡಿ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ಗಳನ್ನು ಸುಲಭವಾಗಿ ಎದುರಿಸಿ, ಶತಕದ ಜೊತೆಯಾಟ ನೀಡಿದರು.
53 ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ವೇಳೆ ಚೇತೇಶ್ವರ್ ಪೂಜಾರಾ ವೇಗಿ ರಬಾಡಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, 58 ರನ್ಗಳಿಕೆ ಮಾಡಿದ್ದ ರಹಾನೆ ಕೂಡ ಅದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ರಬಾಡಾ ಓವರ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸಿ ಬ್ಯಾಟ್ ಮಾಡ್ತಿದ್ದ ಅಶ್ವಿನ್ ವಿಕೆಟ್ ಪಡೆದುಕೊಳ್ಳುವಲ್ಲಿ ಲುಂಗಿ ಎಗ್ಡಿ ಯಶಸ್ವಿಯಾಗಿದ್ದು, ಹರಿಣಗಳ ತಂಡಕ್ಕೆ ಮೇಲುಗೈ ತಂದುಕೊಟ್ಟರು.