ಮುಂಬೈ:ವರ್ಷದ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ರನ್ಗಳಿಂದ ರೋಚಕ ಜಯ ಸಾಧಸಿದೆ. ಭಾರತ ನೀಡಿದ್ದ ಸಾಧಾರಣ ಮೊತ್ತ ಬೆನ್ನು ಹತ್ತಿದ್ದ ಸಿಂಹಳೀಯರಿಗೆ ಚೊಚ್ಚಲ ಪಂದ್ಯವನ್ನು ಆಡಿದ ಶಿವಂ ಮಾವಿ ಕಾಡಿದ್ದು, 4 ಓವರ್ಗೆ 22 ಬಿಟ್ಟುಕೊಟ್ಟು 4 ವಿಕೇಟ್ ಕಬಳಿಸಿದ್ದಾರೆ. ನಾಯಕ ಶನಕ ಅವರ ಹೋರಾಟಕ್ಕೆ ಗೆಲುವಿನ ಫಲ ದೊರೆಯಲಿಲ್ಲ. ಕೊನೆಗೆ ಕರುಣ ರತ್ನೆ ಶತಯಗತಾಯ ಗೆಲುವಿಗೆ ಪ್ರಯತ್ನಿಸಿದರೂ ಕೊನೆಯ ಬಾಲ್ನಲ್ಲಿ ವಿಜಯದ ರನ್ ಕದಿಯಲಾಗದೇ ಸೋಲನಿಭವಿಸಿದರು. ಹರ್ಷಲ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ ಎರಡು ವಿಕೇಟ್ ಪಡೆದರು.
ಮೊದಲ ಇನ್ನಿಂಗ್ಸ್:2023ರ ಮೊದಲ ಸರಣಿಯನ್ನು ಭಾರತ ಲಂಕಾದೊಂದಿಗೆ ವಾಂಖೆಡೆಯಲ್ಲಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ನಿಗದಿತ 20 ಓವರ್ಗಳಿಗೆ ವಿಕೆಟ್ಗಳ 5 ನಷ್ಟಕ್ಕೆ 162 ರನ್ಗಳನ್ನು ಕಲೆ ಹಾಕಿದೆ. ಈ ಮೂಲಕ ಭಾರತ ತಂಡ ಶ್ರೀಲಂಕಾ ತಂಡಕ್ಕೆ ಸಾಧರಣ ಮೊತ್ತದ ಗುರಿ ನೀಡಿದೆ. ಟಿ20 ಸರಣಿಯ ನಾಯಕತ್ವವನ್ನು ನಾಯಕ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದ್ದು, ಈ ಪಂದ್ಯದ ಮೂಲಕ ಶಿವಂ ಮಾವಿ ಮತ್ತು ಶುಭಮನ್ ಗಿಲ್ ಅಂತಾರಾಷ್ಟ್ರೀಯ ಟಿ-20ಗೆ ಪದಾರ್ಪಣೆ ಮಾಡಿದ್ದಾರೆ.
ಭಾರತ ತಂಡಕ್ಕೆ ಆರಂಭಿಕ ಆಘಾತ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಇಶನ್ ಕಿಶನ್ ಮತ್ತು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ-20ಗೆ ಪದಾರ್ಪಣೆ ಮಾಡಿರುವ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಗಿಲ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಮಹೀಶ್ ತೀಕ್ಷಣ ಎಸೆತಕ್ಕೆ ಎಲ್ಬಿಡಬ್ಲ್ಯೂ ಆಗಿ ಪೆವಿಲಿಯನ್ ಹಾದಿ ಹಿಡಿದರು. ಇವರ ಹಿಂದೆನೇ ಸೂರ್ಯ ಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಸಹ ಔಟಾದರು. ಭಾರತ ತಂಡ 46 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.
ಇಶನ್, ಹಾರ್ದಿಕ್ ಜೊತೆಯಾಟ:ಸಂಜು ಬಳಿಕ ಕಣಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯಾ ಇಶನ್ ಜೊತೆ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ಆಟಗಾರರು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರು. ಈ ಇಬ್ಬರು ಆಟಗಾರರು ಸುಮಾರು 30 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಫಲರಾದರು. ಬಳಿಕ 37 ರನ್ಗಳನ್ನು ಕಲೆಹಾಕಿದ್ದ ಇಶನ್ ಔಟಾಗಿ ಹೊರ ನಡೆದರು. ಇವರ ಬೆನ್ನಲ್ಲೇ 29 ರನ್ ಕಲೆ ಹಾಕಿದ್ದ ನಾಯಕ ಹಾರ್ದಿಕ್ ಪಾಂಡ್ಯ ಸಹ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಇವರ ಬಳಿಕ ಬಂದ ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಶ್ರೀಲಂಕಾ ತಂಡದ ಬೌಲರ್ಗಳನ್ನು ಎದುರಿಸಿ ತಂಡದ ಮೊತ್ತ 160 ರನ್ಗಳ ಗಡಿ ದಾಟುವಲ್ಲಿ ಶ್ರಮಿಸಿದರು.