ದುಬೈ:ವಿಶ್ವಕಪ್ಗೂ ಮುನ್ನ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಏಷ್ಯಾಕಪ್ ಗೆಲ್ಲುವ ಫೇವರೆಟ್ ತಂಡ ಎನಿಸಿಕೊಂಡಿದ್ದ ಪಾಕಿಸ್ತಾನ ಸೂಪರ್ ಫೋರ್ ಹಂತದಲ್ಲಿ ಎರಡು ಸೋಲು ಕಂಡು ಫೈನಲ್ಗೆ ಅರ್ಹತೆಯನ್ನೇ ಪಡೆದುಕೊಳ್ಳಲಿಲ್ಲ. ಈ ನಿರಾಸೆಯ ಜೊತೆಗೆ ಪಾಕ್ಗೆ ಶ್ರೇಯಾಂಕ ಕುಸಿತದ ಮುಖಭಂಗವೂ ಎದುರಾಗಿದೆ. ತನ್ನ ದೇಶದಲ್ಲೇ ಸತತ ಏಕದಿನ ಪಂದ್ಯಗಳನ್ನು ಆಡಿ ಐಸಿಸಿ ಏಕದಿನ ತಂಡಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಗಳಿಸಿದ್ದ ತಂಡಕ್ಕೆ ವಿಶ್ವಕಪ್ಗೂ ಮುನ್ನ ಇದು ಭಾರಿ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ನಂ.1 ಸ್ಥಾನಕ್ಕೇರಿದೆ.
ಪಾಕಿಸ್ತಾನದ ಪಿಚ್ಗಳಲ್ಲಿ ಎಲ್ಲಾ ತಂಡಗಳನ್ನೂ ಮಣಿಸಿದ ಪಾಕ್, ಲಂಕಾ ಅಖಾಡದಲ್ಲಿ ಮಂಕಾಯಿತು. ಭಾರತದ ಮುಂದೆ 128 ರನ್ಗಳ ಅಲ್ಪಮೊತ್ತಕ್ಕೆ ಕುಸಿದರೆ, ನಿನ್ನೆ (ಗುರುವಾರ) ಶ್ರೀಲಂಕಾ ವಿರುದ್ಧ ಹೋರಾಡಿ ಸೋಲನುಭವಿಸಿತು. ನಿನ್ನೆಯ ಸೋಲಿನಿಂದ ಪಾಕಿಸ್ತಾನ ನಂ.1 ರ್‍ಯಾಂಕಿಂಗ್ ಮತ್ತು ಏಷ್ಯಾಕಪ್ ಫೈನಲ್ ಪ್ರವೇಶವನ್ನು ಕಳೆದುಕೊಂಡಿತು.
ವಿಶ್ವಕಪ್ಗೂ ಮುನ್ನ ಭಾರತ ನಂ. 1!: ವಿಶ್ವಕಪ್ಗೂ ಮುನ್ನ ಭಾರತ ತಂಡ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ. ನಂ.1 ಆಗಿದ್ದ ಪಾಕ್ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಏಷ್ಯಾಕಪ್ನಲ್ಲಿ ಇಂದು ಬಾಂಗ್ಲಾ ವಿರುದ್ಧ ಆಡುತ್ತಿದ್ದು, ಸೆಪ್ಟೆಂಬರ್ 17ಕ್ಕೆ ಶ್ರೀಲಂಕಾ ವಿರುದ್ಧ ಏಷ್ಯಾಕಪ್ ಫೈನಲ್ ಪಂದ್ಯವಿದೆ. ಇದಾದ ನಂತರ ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಜೊತೆ ತವರು ಮೈದಾನದಲ್ಲಿ ಮೂರು ಏಕದಿನ ಪಂದ್ಯದ ಸರಣಿ ಆಡಲಿದೆ. ಇವುಗಳಲ್ಲಿ ಭಾರತ ಸತತ ಗೆಲುವು ಸಾಧಿಸಿದೇ ಆದಲ್ಲಿ ವಿಶ್ವಕಪ್ಗೂ ಮುನ್ನ ಅಗ್ರಸ್ಥಾನ ಅಲಂಕರಿಸಲಿದೆ. ಸದ್ಯ ಭಾರತ ಟೆಸ್ಟ್ ಮತ್ತು ಟಿ20ಯಲ್ಲಿ ನಂ.1 ತಂಡವಾಗಿದೆ. ಏಕದಿನದಲ್ಲೂ ಅಗ್ರ ಶ್ರೇಯಾಂಕಿತ ತಂಡವಾದರೆ ಮತ್ತೆ ಮೂರು ಮಾದರಿಯ 'ಬಾದ್ಶಾ' ಆಗಲಿದೆ.