ಪೋರ್ಟ್ ಆಫ್ ಸ್ಪೇನ್: 308 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಕೊನೆಯಲ್ಲಿ ತಡವರಿಸಿ 3 ರನ್ಗಳಿಂದ ಭಾರತದ ಎದುರು ಸೋಲು ಕಂಡಿತು. ಕೊನೆಯ ಓವರ್ನಲ್ಲಿ 15 ರನ್ಗಳ ಅವಶ್ಯಕತೆ ಇದ್ದಾಗ ಉತ್ತಮವಾಗಿ ಬೌಲ್ ಮಾಡಿ ಮಹಮದ್ ಶಿರಾಜ್ ಭಾರತಕ್ಕೆ ಗೆಲುವು ತಂದುಕೊಟ್ಟರು. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಅದ್ಭುತ ಆರಂಭ ನೀಡಿದರು. ಇಬ್ಬರೂ ಆಟಗಾರರು ಅರ್ಧಶತಕ ಸಿಡಿಸಿ ಮೊದಲ ವಿಕೆಟ್ಗೆ 119 ರನ್ಗಳ ಜೊತೆಯಾಟ ನೀಡಿದರು.
ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ 3 ವರ್ಷಗಳ ಬಳಿಕ ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಿಡಿಸಿದರು. ಉತ್ತಮವಾಗಿ ಆಡುತ್ತಿದ್ದ ಅವರು 64 ರನ್ ಗಳಿಸಿದ್ದಾಗ ಅನಾವಶ್ಯಕ ರನ್ ಗಳಿಸಲು ಮುಂದಾಗಿ ರನೌಟ್ ಆದರು.
ಶತಕ ವಂಚಿತ ಶಿಖರ್:ಬಳಿಕ ಬಂದ ಶ್ರೇಯಸ್ ಅಯ್ಯರ್, ಧವನ್ ಜೊತೆಗೂಡಿ ಇನಿಂಗ್ಸ್ ಬೆಳೆಸಿದರು. ವೆಸ್ಟ್ ಇಂಡೀಸ್ ಬೌಲರ್ಗಳನ್ನು ಅನಾಯಾಸವಾಗಿ ಎದುರಿಸುತ್ತಿದ್ದ ಶಿಖರ್ ಧವನ್ ಶತಕದ ಅಂಚಿನಲ್ಲಿ ಔಟಾದರು. 99 ಎಸೆತಗಳಲ್ಲಿ 97 ರನ್ಗಳಿಸಿದ್ದಾಗ ಸ್ಪಿನ್ನರ್ ಗುಡಕೇಶ್ ಮೋಟಿ ಎಸೆತದಲ್ಲಿ ಪಾಯಿಂಟ್ನಲ್ಲಿದ್ದ ಬ್ರೂಕ್ಸ್ಗೆ ಕ್ಯಾಚಿತ್ತು ನಿರಾಸೆಯಿಂದ ಹೊರನಡೆದರು.
ಬಿರುಸಿನ ಆಟವಾಡಿದ ಶ್ರೇಯಸ್ ಅಯ್ಯರ್ (54) ಅರ್ಧಶತಕ ಬಾರಿಸಿದರು. ಸೂರ್ಯಕುಮಾರ್ ಯಾದವ್ (13), ಸಂಜು ಸ್ಯಾಮ್ಸನ್(12) ರನ್ ಗಳಿಸಿದರೆ, ದೀಪಕ್ ಹೂಡಾ(27), ಅಕ್ಸರ್ ಪಟೇಲ್(21) ರನ್ ಗಳಿಸಿ ತಂಡ 300 ಗಡಿ ದಾಟುವಂತೆ ಮಾಡಿದರು.