ಕೇಪ್ ಟೌನ್:ಇಲ್ಲಿನ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ಹರಿಣಗಳ ವಿರುದ್ಧ ಸ್ಮರಣೀಯ ಗೆಲುವು ದಾಖಲಿಸಿದ ಭಾರತ ಕ್ರಿಕೆಟ್ ತಂಡ 26 ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ ಪಡೆದಿದೆ.
ಸೆಂಚುರಿಯನ್‌ನಲ್ಲಿ ಭಾರತ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಜಯ ಗಳಿಸಿದ ಬಳಿಕ, ದಕ್ಷಿಣ ಆಫ್ರಿಕಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿತ್ತು. ಬಳಿಕ ಕೇಪ್ ಟೌನ್‌ನಲ್ಲಿನ ಸೋಲಿನಿಂದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದಂತೆಯೇ ಹರಿಣಗಳ ಗೆಲುವಿನ ಶೇಕಡಾವಾರು ಪ್ರಮಾಣವೂ 50% ಕ್ಕೆ ಇಳಿದಿದೆ. ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ್ದ ಭಾರತ ಭರ್ಜರಿ ಕಮ್ಬ್ಯಾಕ್ ಮಾಡುವ ಮೂಲಕ ಸಮಬಲ ಸಾಧಿಸಿತ್ತು.
ಕೇಪ್ ಟೌನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು 55 ರನ್‌ಗಳಿಗೆ ಆಲೌಟ್ ಮಾಡಿ ಭಾರತ ಮೇಲುಗೈ ಸಾಧಿಸಿತ್ತು. ತಂಡದ ಪರ ವೇಗಿ ಮೊಹಮದ್ ಸಿರಾಜ್ 6 ವಿಕೆಟ್ ಪಡೆದು ಹರಿಣಗಳನ್ನು ಕಾಡಿದರು. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 4 ವಿಕೆಟ್ಗೆ 153 ರನ್ ಬಾರಿಸಿದ್ದ ಭಾರತ, ದಿಢೀರ್ ಕುಸಿತ ಕಂಡಿತ್ತು. 153 ರನ್ಗಳಿಗೇ ಎಲ್ಲ ವಿಕೆಟ್ ಪತನವಾಗಿದ್ದು, ಕೊನೆಯ 6 ಆಟಗಾರರು ತಂಡದ ಮೊತ್ತಕ್ಕೆ ಯಾವುದೇ ರನ್ ಸೇರಿಸದೆ ಪೆವಿಲಿಯನ್ ಪರೇಡ್ ನಡೆಸಿದ್ದರು.