ಸೆಂಚುರಿಯನ್ (ದಕ್ಷಿಣ ಆಫ್ರಿಕಾ):ಇಲ್ಲಿ ಹರಿಣಗಳ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳನ್ನು ಕಡಿತ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪ್ರಕಟಿಸಿದೆ.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಭಾರತಕ್ಕೆ ತಮ್ಮ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ಮತ್ತು ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ದಂಡ ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.
ಗುರಿಗಿಂತ ಎರಡು ಓವರ್‌ಗಳು ಕಡಿಮೆ ಬೌಲಿಂಗ್ ಮಾಡಿದ ಭಾರತಕ್ಕೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರೀಸ್‌ನ ಕ್ರಿಸ್ ಬ್ರಾಡ್ ಭಾರತವು ಗುರಿಗಿಂತ ಎರಡು ಓವರ್‌ಗಳ ಕೊರತೆಯಿದೆ ಎಂದು ತೀರ್ಪು ನೀಡಿದ್ದಾರೆ.
ನಿಯಮ: "ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದೆ. ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಐದು ಶೇಕಡಾ ದಂಡವನ್ನು ವಿಧಿಸಲಾಗುತ್ತದೆ. ಹಾಗೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರ್ಟಿಕಲ್ 16.11.2 ರ ಪ್ರಕಾರ, ಪ್ರತಿ ಓವರ್‌ಗೆ ಒಂದು ಅಂಕವನ್ನು ದಂಡ ವಿಧಿಸಲಾಗುತ್ತದೆ. ಅದರಂತೆ, ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಭಾರತದ ಒಟ್ಟು ಅಂಕಗಳಿಂದ ಕಡಿತಗೊಳಿಸಲಾಗಿದೆ.
"ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ರೀಫೆಲ್ ಮತ್ತು ಲ್ಯಾಂಗ್ಟನ್ ರುಸೆರೆ, ಮೂರನೇ ಅಂಪೈರ್ ಅಹ್ಸಾನ್ ರಜಾ ಮತ್ತು ನಾಲ್ಕನೇ ಅಂಪೈರ್ ಸ್ಟೀಫನ್ ಹ್ಯಾರಿಸ್ ಅವರ ಆರೋಪವನ್ನು ಭಾರತದ ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡರು. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಮದು ಐಸಿಸಿ ತಿಳಿಸಿದೆ".
ಡಬ್ಲ್ಯುಟಿಸಿ ಅಂಕ ಪಟ್ಟಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಎರಡು ಅಂಕಗಳನ್ನು ಕಳೆದುಕೊಂಡು ಭಾರಿ ಕುಸಿತವನ್ನು ಅನುಭವಿಸಿದೆ. 1ರಿಂದ 6ನೇ ಸ್ಥಾನಕ್ಕೆ ಇಳಿಕೆ ಆಗಿದೆ. ಭಾರತವು ಮೂರು ಟೆಸ್ಟ್‌ಗಳಿಂದ 14 ಅಂಕಗಳೊಂದಿಗೆ ಮತ್ತು ಶೇಕಡಾ 38.89 ಅಂಕಗಳೊಂದಿಗೆ 6ನೇ ಸ್ಥಾನವನ್ನು ಪಡೆದುಕೊಂಡಿದೆ. 2025ರ ಡಬ್ಲ್ಯುಟಿಸಿ ಪ್ರವಾಸ ಪ್ರಥಮ ಪಂದ್ಯವನ್ನು ಗೆದ್ದಿರುವ ಹರಿಣಗಳು ಶೇಕಡಾ 100 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ:'ಬಾಕ್ಸಿಂಗ್ ಡೇ ಟೆಸ್ಟ್' ಗೆದ್ದ ದಕ್ಷಿಣ ಆಫ್ರಿಕಾ; ಭಾರತದ ಬ್ಯಾಟಿಂಗ್ ವೈಫಲ್ಯ