ನವದೆಹಲಿ: ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿ ಕಣಕ್ಕಿಳಿಯಲಿವೆ. 2023/24 ರ ಕ್ರಿಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, ಏಷ್ಯಾಕಪ್ನಲ್ಲಿ ಸ್ಪರ್ಧಿಸಲಿರುವ ತಂಡಗಳ ಗುಂಪುಗಳನ್ನು ಟ್ವೀಟ್ ಮಾಡುವ ಮೂಲಕ ಗುರುವಾರ ಬಹಿರಂಗಪಡಿಸಿದ್ದಾರೆ.
ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡ ಒಂದೇ ಗುಂಪಿನಲ್ಲಿ ಸೆಣೆಸಲಿವೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳ ದೃಷ್ಟಿ ಈಗ ಏಷ್ಯಾ ಕಪ್ ಮೇಲೆ ನೆಟ್ಟಿದೆ. ಇತ್ತೀಚೆಗೆ ಟಿ20 ವಿಶ್ವಕಪ್ನಲ್ಲಿಯೂ ಉಭಯ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿದ್ದವು. ಈ ಮೆಗಾ ಫೈಟ್ ನಂತರ ಮೈದಾನದಲ್ಲಿ ಭಾರತ ಹಾಗೂ ಪಾಕ್ ಮುಖಾಮುಖಿ ಮತ್ತೆ ಯಾವಾಗ ಎನ್ನುವು ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತೆಯೂ ಆಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಗೌರವ ಕಾರ್ಯದರ್ಶಿಯೂ ಆಗಿರುವ ಜಯ್ ಶಾ ಬಿಡುಗಡೆ ಮಾಡಿರುವ ಈ ಕ್ಯಾಲೆಂಡರ್ನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆರು ತಂಡಗಳಂತೆ ಎರಡು ಗುಂಪುಗಳನ್ನಾಗಿ ಮಾಡಿದೆ. ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ 1 ತಂಡಗಳು ಎ ಗುಂಪಿನಲ್ಲಿದ್ದು, ಬಾಂಗ್ಲಾದೇಶ, ಹಾಲಿ ಚಾಂಪಿಯನ್ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಬಿ ಗುಂಪಿನಲ್ಲಿ ಸ್ಪರ್ಧಿಸಲಿವೆ. ಆದರೆ, ಪಂದ್ಯಾವಳಿ ಎಲ್ಲಿ ನಡೆಯುತ್ತದೆ ಎನ್ನುವ ಬಗ್ಗೆ ಇನ್ನೂ ಬಹಿರಂಗಪಡಿಸಿಲ್ಲ.
ಈ ಹೊಸ ಕ್ಯಾಲೆಂಡರ್ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಎರಡು ವರ್ಷಗಳ ಋತುವಿನಲ್ಲಿ ಏಕದಿನ ಮತ್ತು ಟಿ20 ಎರಡರಲ್ಲೂ 145 ಪಂದ್ಯಗಳನ್ನು ಆಯೋಜಿಸುತ್ತದೆ. ಒಟ್ಟು 145 ಪಂದ್ಯಗಳ ಪೈಕಿ 2023ರಲ್ಲಿ 75 ಪಂದ್ಯಗಳನ್ನು ಆಡಲಾಗುತ್ತದೆ. 2024ರಲ್ಲಿ 70 ಪಂದ್ಯಗಳು ನಡೆಯಲಿವೆ. ಇದರಲ್ಲಿ ಪುರುಷರ ಉದಯೋನ್ಮುಖ (U23) ಏಷ್ಯಾ ಕಪ್ ಕೂಡ ಸೇರಿದೆ. ಮಹಿಳೆಯರ ಏಷ್ಯಾ ಕಪ್ 2024ರ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನವನ್ನು ಕ್ವಾಲಿಫೈಯರ್ ಜೊತೆಗೆ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಶ್ರೀಲಂಕಾವನ್ನು ಬಾಂಗ್ಲಾದೇಶ ಮತ್ತು ಇನ್ನೊಂದು ಗುಂಪಿನಲ್ಲಿ ಅರ್ಹತಾ ಆಟಗಾರರು ಸೇರಿಕೊಳ್ಳುತ್ತಾರೆ.