ಇಸ್ಲಾಮಾಬಾದ್(ಪಾಕಿಸ್ತಾನ):ಭಾರತ-ಪಾಕಿಸ್ತಾನ ತಂಡಗಳ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಸರಣಿ ಆಯೋಜನೆ ಅಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ರೀತಿಯ ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(PCB)ಗೆ ಹೊಸದಾಗಿ ಆಯ್ಕೆಯಾಗಿರುವ ರಮೀಜ್ ರಾಜ್ ತಿಳಿಸಿದ್ದಾರೆ.
ಪಿಸಿಬಿಯ ಹೊಸ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ರಾಜಕೀಯದಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪುನಾರಂಭ ಅಸಾಧ್ಯ. ದೇಶಿ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹುದ್ದೆ ನಿಭಾಯಿಸುವುದು ಸವಾಲಿನ ಕೆಲಸ. ಕ್ರಿಕೆಟ್ ಮಂಡಳಿಯ ಅಭಿವೃದ್ಧಿಗೋಸ್ಕರ ಕೆಲಸ ಮಾಡುವುದಾಗಿ ರಮೀಜ್ ರಾಜಾ ತಿಳಿಸಿದರು. ಡಿಆರ್ಎಸ್ ನಿರ್ಧಾರದಲ್ಲಿ ಕೆಲವೊಂದು ಗೊಂದಲಗಳಿವೆ. ಈ ವಿಷಯದ ಬಗ್ಗೆ ಮುಂಬರುವ ಪಾಕ್-ನ್ಯೂಜಿಲ್ಯಾಂಡ್ ಕ್ರಿಕೆಟ್ ಸರಣಿ ವೇಳೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.