ನವದೆಹಲಿ :ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿರುವ ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜಕೀಯ ಸೇರಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಆಫರ್ ಬಂದಿವೆ ಎಂದು ತಿಳಿಸಿದ್ದಾರೆ.
ಸುಮಾರು 23 ವರ್ಷಗಳ ಕಾಲ ಟೀಂ ಇಂಡಿಯಾದ ಭಾಗವಾಗಿದ್ದ ಹರ್ಭಜನ್ ಸಿಂಗ್ 2016ರಿಂದ ಮೈದಾನಕ್ಕಿಳಿದಿರಲಿಲ್ಲ. ಆದರೆ, ಐಪಿಎಲ್ನಲ್ಲಿ ವಿವಿಧ ತಂಡಗಳ ಪರವಾಗಿ ಆಟವಾಡಿರುವ ಇವರು, ನಿನ್ನೆ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದರು.
ಇದರ ಬೆನ್ನಲ್ಲೇ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿರುವ ಹರ್ಭಜನ್, ರಾಜಕೀಯ ಸೇರಿಕೊಳ್ಳುವುದಕ್ಕೆ ಸಂಬಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳಿಂದ ಆಫರ್ ಬಂದಿದ್ದು, ಕಾಂಗ್ರೆಸ್ನ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದೇನೆ. ಅವರು ಕಾಂಗ್ರೆಸ್ ಸೇರಿಕೊಳ್ಳುವಂತೆ ಆಫರ್ ನೀಡಿದ್ದು, ಈವರೆಗೆ ನಾನು ಯಾವುದೇ ಫೈನಲ್ ನಿರ್ಧಾರ ಕೈಗೊಂಡಿಲ್ಲ ಎಂದರು.
ರಾಜಕೀಯ ಪಕ್ಷವೊಂದಕ್ಕೆ ಸೇರ್ಪಡೆಯಾಗುವ ಕುರಿತಂತೆ ಹರ್ಭಜನ್ ಸಿಂಗ್ ಸ್ಪಷ್ಟನೆ ನೀಡಿರುವುದು.. ಎಲ್ಲ ಪಕ್ಷದ ರಾಜಕೀಯ ಮುಖಂಡರ ಬಗ್ಗೆ ನನಗೆ ಗೊತ್ತಿದೆ. ಪಕ್ಷ ಸೇರಿಕೊಳ್ಳುವುದಕ್ಕೂ ಮುಂಚಿತವಾಗಿ ನಾನು ಅದರ ಬಗ್ಗೆ ಖುದ್ದಾಗಿ ಘೋಷಣೆ ಮಾಡುತ್ತೇನೆ. ಪಂಜಾಬ್ನಲ್ಲಿ ಸೇವೆ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ಅದು ರಾಜಕೀಯ ಅಥವಾ ಬೇರೆ ಯಾವುದೇ ಮಾರ್ಗವಾಗಿರಬಹುದು ಎಂದಿದ್ದಾರೆ.
ಇದನ್ನೂ ಓದಿರಿ:ಎಲ್ಲ ಮಾದರಿ ಕ್ರಿಕೆಟ್ಗೆ ವಿದಾಯ ಘೋಷಿಸಿದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್
2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ನ ಭಾಗವಾಗಿದ್ದ ಹರ್ಭಜನ್ ಸಿಂಗ್, 2007ರ ಚುಟುಕು ಕ್ರಿಕೆಟ್ನಲ್ಲಿ 7 ವಿಕೆಟ್ ಹಾಗೂ 2011ರ ವಿಶ್ವಕಪ್ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
2016ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿರುವ ಹರ್ಭಜನ್ ಸಿಂಗ್, 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಪಡೆದುಕೊಂಡಿದ್ದಾರೆ. ಏಕದಿನದಲ್ಲಿ 269 ಹಾಗೂ ಟಿ-20ಯಲ್ಲಿ 25 ವಿಕೆಟ್ ಪಡೆದಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದಾರೆ.