ಹ್ಯಾಮಿಲ್ಟನ್(ನ್ಯೂಜಿಲ್ಯಾಂಡ್):ಕಳಪೆ ಬೌಲಿಂಗ್ನಿಂದಾಗಿಯೇ ಟಿ20 ವಿಶ್ವಕಪ್ನಲ್ಲಿ ವೈಫಲ್ಯ ಅನುಭವಿಸಿದ್ದ ಭಾರತ ನ್ಯೂಜಿಲ್ಯಾಂಡ್ ಏಕದಿನ ಸರಣಿಯಲ್ಲೂ ಅದೇ ಚಾಳಿ ಮುಂದುವರಿಸಿದೆ. ಉತ್ತಮ ಬ್ಯಾಟಿಂಗ್ ನಡುವೆಯೂ ಮೊದಲ ಏಕದಿನ ಪಂದ್ಯದಲ್ಲಿ ಯುವ ಬೌಲರ್ಗಳು ಕರಾಮತ್ತು ನಡೆಸದ ಕಾರಣ ಭಾರತ ಸೋಲು ಅನುಭವಿಸಿತು. ಹಿರಿಯರ ಬದಲಾಗಿ ಅವಕಾಶ ಪಡೆದಿರುವ ಯುವ ಪಡೆ ತನ್ನ ಖದರ್ ತೋರಿಸುವಲ್ಲಿ ಎಡವಿದೆ.
ನಾಳೆ (ಭಾನುವಾರ) ಹ್ಯಾಮಿಲ್ಟನ್ನ ಸೆಡನ್ ಪಾರ್ಕ್‌ನಲ್ಲಿ 2ನೇ ಏಕದಿನ ಪಂದ್ಯ ನಡೆಯಲಿದ್ದು, ಇದು ಭಾರತಕ್ಕೆ ಸರಣಿ ಗೆಲುವಿಗಾಗಿ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿಯಾದ ನಾಯಕ ಶಿಖರ್ ಧವನ್, ಶುಭ್ಮನ್ ಗಿಲ್ ಶತಕದ ಜೊತೆಯಾಟ ನೀಡಿದ್ದರು. ಇದನ್ನು ನಾಳಿನ ಪಂದ್ಯದಲ್ಲಿ ಮುಂದುವರಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಆಧಾರ ನೀಡಲಿದ್ದಾರೆ.
ಬೌಲಿಂಗ್ನದ್ದೇ ಚಿಂತೆ:ಭಾರತ ತಂಡದ ಪ್ರಮುಖ ಕೊರತೆಯೇ ಬೌಲಿಂಗ್ ವಿಭಾಗ. ಚಿಕ್ಕ ಮೈದಾನ ಹೊಂದಿರುವ ಕಿವೀಸ್ ನಾಡಿನಲ್ಲಿ ಭಾರತೀಯರು ಲಯ ಕಂಡುಕೊಳ್ಳಬೇಕಿದೆ. ಯುವವೇಗಿ ಉಮ್ರಾನ್ ಮಲಿಕ್ ಕಳೆದ ಪಂದ್ಯದಲ್ಲಿ ವಿಕೆಟ್ ಕಿತ್ತಿದ್ದರು. ಆದರೆ, ಅರ್ಷದೀಪ್ ಸಿಂಗ್, ಶಾರ್ದೂಲ್ ಠಾಕೂರ್, ದೀಪಕ್ಚಹರ್ ವಿಕೆಟ್ ಪಡೆಯುವಲ್ಲಿ ಸೋತಿದ್ದಾರೆ. ಸ್ಪಿನ್ನರ್ ಯಜುವೇಂದ್ರ ಚಹಲ್ ಅಸ್ತ್ರವೂ ಫಲ ನೀಡುತ್ತಿಲ್ಲ. ಚಹಲ್ ಬದಲಾಗಿ ಕುಲದೀಪ್ ಯಾದವ್ಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ.
ಭರ್ಜರಿ ಆತ್ಮವಿಶ್ವಾಸದಲ್ಲಿ ನ್ಯೂಜಿಲ್ಯಾಂಡ್:ಇನ್ನು ಮೊದಲ ಪಂದ್ಯವನ್ನು ಗೆದ್ದಿರುವ ನ್ಯೂಜಿಲ್ಯಾಂಡ್ ಪಡೆ ಆತ್ಮವಿಶ್ವಾಸದಲ್ಲಿದೆ. ನಾಯಕ ಕೇನ್ ವಿಲಿಯಮ್ಸನ್, ಟಾಮ್ ಲಾಥಮ್ ಭಾರತವನ್ನು ಕಾಡಿದ್ದು, ಮುಂದಿನ ಪಂದ್ಯಕ್ಕೂ ತಾವು ಸಿದ್ಧ ಎಂದಿದ್ದಾರೆ. ಯುವ ಆರಂಭಿಲ ಫಿನ್ ಅಲೆನ್ ಅವಕಾಶ ಸದುಪಯೋಗಕ್ಕೆ ಕಾದಿದ್ದಾರೆ. ಡೆವಿನ್ ಕಾನ್ವೇ ಮತ್ತೊಂದು ದೊಡ್ಡ ಇನಿಂಗ್ಸ್ ಕಟ್ಟಲು ಹೊಂಚು ಹಾಕಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆ್ಯಡಂ ಮಿಲ್ನೆ, ಟಿಮ್ ಸೌಥಿ ಲೂಕಿ ಫರ್ಗುಸನ್ ದಾಳಿಗೆ ಸನ್ನದ್ಧರಾಗಿದ್ದಾರೆ.