ಅಹಮದಾಬಾದ್(ಗುಜರಾತ್): ವಿಶ್ವಕಪ್ ಫೈನಲ್ಗೂ ಮುನ್ನ ರೋಹಿತ್ ಶರ್ಮಾ ಹೇಳಿದ್ದ ಮಾತು ಈಗ ವೈರಲ್ ಆಗುತ್ತಿದೆ. ಅದರಲ್ಲಿ ಭಾರತ ನಾಯಕ ಕುಂತಲ್ಲಿ, ನಿಂತಲ್ಲಿ, ಕನಸಿನಲ್ಲೂ ವಿಶ್ವಕಪ್ ಕಣ್ಣ ಮುಂದೆ ಬರುತ್ತದೆ ಎಂದು ಹೇಳಿದ್ದಾರೆ. ನಾಯಕನಾಗಿ ಈ ಟ್ರೋಫಿಯ ಬಗ್ಗೆ ಅಷ್ಟೊಂದು ಕನಸು ಕಟ್ಟಿಕೊಂಡಿದ್ದ ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಕಣ್ಣೀರಿಟ್ಟರು. ನರೇಂದ್ರ ಮೋದಿ ಕ್ರೀಡಾಂಗಣದ ನಡುವಿನಿಂದ ಬೌಂಡರಿ ಲೈನ್ ತಲುಪುವಷ್ಟರಲ್ಲಿ ಅವರ ಕಣ್ಣಾಲಿಗಳು ನೀರು ತುಂಬಿಕೊಂಡಿದ್ದವು. ರೋಹಿತ್ ಶರ್ಮಾ ಅವರ ಆ ಭಾರದ ನಡೆಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೂ ನಾಟಿತ್ತು.
ಆದರೆ ರೋಹಿತ್ ಈ ಸೋಲಿನಿಂದಾಗಿ ನಾಯಕತ್ವವನ್ನು ತೊರೆಯುವ ನಿರ್ಧಾರ ಮಾಡಿದಲ್ಲಿ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಅಲ್ಲದೇ, ಅವರ ನಾಯಕತ್ವ ಪ್ರಶ್ನೆ ಮಾಡುವಂತಹ ಪ್ರದರ್ಶನ ಟೂರ್ನಿಯಲ್ಲಿ ಬಂದಿಲ್ಲ. ಹೀಗಿರುವಾಗ ರೋಹಿತ್ ನಾಯಕತ್ವದಿಂದ ಹಿಂದೆ ಸರಿದರೆ ತಂಡದಲ್ಲಿ ಒಂದು ದೊಡ್ಡ ನಿರ್ವಾತ ಉಂಟಾಗಬಹುದು. ಅಲ್ಲದೇ ತಂಡ ಪ್ರದರ್ಶನದ ಮೇಲೆ ದೊಡ್ಡ ಪರಿಣಾಮವೂ ಆಗಬಹುದು.
ರೋಹಿತ್ ಶರ್ಮಾ ಸುತ್ತ ಜಗತ್ತು ಕುಸಿದಿದೆ ಎಂದು ತೋರುತ್ತಿದ್ದರೂ, ಭಾರತೀಯ ಕ್ರಿಕೆಟ್ ತಂಡಕ್ಕೆ ಕನಿಷ್ಠ ಎರಡು ವರ್ಷಗಳ ಕಾಲ ದೀರ್ಘ ಸ್ವರೂಪಗಳಲ್ಲಿ ಅವರು ಚುಕ್ಕಾಣಿ ಹಿಡಿಯಬೇಕಾದ ಅಗತ್ಯ ಇದೆ. 2007ರಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದ ಅವಧಿಯು ಕೊನೆಗೊಂಡಾಗ, ಧೋನಿ ತಂಡದಲ್ಲಿ ಬದಲಿ ನಾಯಕರಾಗಲು ಸಿದ್ಧರಿದ್ದರು. ಧೋನಿ ನಿರ್ಗಮಿಸಿದಾಗ, ವಿರಾಟ್ ಕೊಹ್ಲಿ ರೂಪದಲ್ಲಿ ಈಗಾಗಲೇ ಉತ್ತರಾಧಿಕಾರದ ಯೋಜನೆ ಇತ್ತು. ಕೊಹ್ಲಿಯಿಂದ ರೋಹಿತ್ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದರು.
ರೋಹಿತ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ರೋಹಿತ್ ಶರ್ಮಾ ಅವರನ್ನು ಬಿಟ್ಟು ಈಗಲೇ ರಾಹುಲ್ ಅವರಿಗೆ ಸಂಪೂರ್ಣ ನಾಯಕತ್ವವನ್ನು ಕಟ್ಟಲು ಸಾಧ್ಯವಿಲ್ಲ. ಹಾಗೇ ರಾಹುಲ್ ಅವರನ್ನು ಪರ್ಯಾಯ ನಾಯಕರಾಗಿ ತಂಡ ಇದುವರೆಗೂ ಬಿಂಬಿಸಿಲ್ಲ. ಈ ಸ್ಥಾನಕ್ಕೆ ಹೊಸ ಅಭ್ಯರ್ಥಿಯ ಹುಡುಕಾಟ ಇದ್ದೇ ಇದೆ. ಅತ್ತ ಪಂತ್ ಅವರ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆಗಳೂ ಇದೆ. ಆದರೆ ಯುವ ಆಟಗಾರರು ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ವರ್ಷಗಳಷ್ಟು ಕಾಲದ ಅಗತ್ಯವಿದೆ, ಆಯ್ಕೆದಾರರಿಗೆ ರೋಹಿತ್‌ನೊಂದಿಗೆ ಮುಂದುವರಿಯುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ.
ನಾಯಕತ್ವದ ಬಗ್ಗೆ ದ್ರಾವಿಡ್ ಹೇಳಿದ್ದು:ಕೋಚ್ ರಾಹುಲ್ ದ್ರಾವಿಡ್ ಪಂದ್ಯದ ನಂತರ ಮಾತನಾಡಿದಾಗ "ರೋಹಿತ್ ಅಸಾಧಾರಣ ನಾಯಕರಾಗಿದ್ದಾರೆ. ರೋಹಿತ್ ಅವರು ನಿಜವಾಗಿಯೂ ಈ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಹುಡುಗರಿಗೆ ನೀಡಿದ್ದಾರೆ. ಅವರು ನಮ್ಮ ಯಾವುದೇ ಸಂಭಾಷಣೆಗಳಿಗೆ, ನಮ್ಮ ಯಾವುದೇ ಸಭೆಗಳಿಗೆ ಯಾವಾಗಲೂ ಲಭ್ಯವಿರುತ್ತಾರೆ" ಎಂದು ದ್ರಾವಿಡ್ ಹೇಳಿದರು.
ವಿಶ್ವಕಪ್ ಅಭಿಯಾನದಲ್ಲಿ 'ಕ್ಯಾಪ್ಟನ್ ಶರ್ಮಾ' ಅದ್ಭುತ ಪ್ರದರ್ಶನ ನೀಡಿದ್ದಾರೆ. ರೋಹಿತ್ ಟೂರ್ನಿ ಉದ್ದಕ್ಕೂ ಡೇರಿಂಗ್ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಪಂದ್ಯದ ಒತ್ತಡದ ಸಮಯವನ್ನು ಉತ್ತಮವಾಗಿ ನಿಬಾಯಿಸಿದ್ದಾರೆ. ಬೌಲಿಂಗ್ ಬದಲಾವಣೆಯೂ ತಂಡದ ಯಶಸ್ಸಿನ ಗುಟ್ಟಾಗಿತ್ತು. ತಂಡವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯವೂ ಅವರು ಗಳಿಸಿದ್ದರು. ಅವರ ಈ ಎಲ್ಲಾ ಗುಣ ತಂಡದ ಯಶಸ್ಸಿಗೆ ಕಾರಣ ಆಗಿತ್ತು.