ನವದೆಹಲಿ:ವಿದೇಶಿ ಪಿಚ್‌ನಲ್ಲಿ ಭಾರತ ತಂಡ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅವರಂತಹ ಆಲ್ರೌಂಡರ್ಗಳು ಬೇಕು. ಆರು, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 10 ರಿಂದ 15 ಓವರ್ ಬೌಲಿಂಗ್ ಮಾಡುವ ಆಟಗಾರನ ಅವಶ್ಯಕತೆ ತಂಡಕ್ಕಿದೆ. ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ವಿದೇಶಿ ಪಿಚ್‌ನಲ್ಲಿ ಭಾರತಕ್ಕೆ ಸಾಧನೆ ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸೆರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ 1-0 ರಿಂದ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು. ಇದಕ್ಕೂ ಮುನ್ನ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಸೋಲುಂಡಿತ್ತು. ಅದಕ್ಕೂ ಮುನ್ನ ಬಾಂಗ್ಲಾದೇಶದಲ್ಲಿ ನಡೆದ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿತ್ತು. ಹೀಗಾಗಿ ರೋಹಿತ್ ಬಳಗ ವಿದೇಶದಲ್ಲಿ ಮಿಂಚಬೇಕಾದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡದಲ್ಲಿರುವ ಆಲ್ರೌಂಡರ್ಗಳ ರೀತಿಯ ಪ್ರತಿಭೆಗಳು ಬೇಕು ಎಂದು ಐಸಿಸಿ ರಿವ್ಯೂನಲ್ಲಿ ಹುಸೇನ್ ಹೇಳಿದರು.
"ಭಾರತ ತವರು ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ದೇಶೀಯ ಮೈದಾನಕ್ಕೆ ಸಮತೋಲಿತ ತಂಡ ಬೇಕು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಅನುಭವಿ ವಿಶ್ವದರ್ಜೆಯ ಆಟಗಾರರು ತಂಡದಲ್ಲಿದ್ದಾರೆ. ಯುವ ಆಟಗಾರರು ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶುಭಮನ್ ಗಿಲ್ ಮುಂದಿನ ಸ್ಟಾರ್ ಆಟಗಾರ" ಎಂದು ಅವರು ಭವಿಷ್ಯ ನುಡಿದರು.
"ಜಸ್ಪ್ರೀತ್ ಬುಮ್ರಾ ಚೇತರಿಸಿಕೊಂಡು ತಂಡ ಸೇರಿದರೆ, ಯುವ ವೇಗಿಗಳೊಂದಿಗೆ ಭಾರತದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಲಿದೆ. ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಉತ್ತಮ ಆಲ್ರೌಂಡರ್ಗಳಾಗಿದ್ದಾರೆ. ಹೀಗಾಗಿ 7ನೇ ಸ್ಥಾನದವರೆಗೂ ಬ್ಯಾಟಿಂಗ್ ಸಾಮರ್ಥ್ಯ ಇರಲಿದೆ" ಎಂದಿದ್ದಾರೆ.